ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಇತಿಹಾಸದಲ್ಲಿಯೇ ಫ್ರಾಂಚೈಸಿಯೊಂದಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ವೈಭವ್ ಸೂರ್ಯವಂಶಿ ಭಾಜನರಾಗಿದ್ದಾರೆ. ಸೋಮವಾರ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದ್ದ 2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 1.10 ಕೋಟಿ ರೂ. ಗಳಿಗೆ ಖರೀದಿಸಿತ್ತು. ರಾಜಸ್ಥಾನ್ ರಾಯಲ್ಸ್ ಹೆಡ್ ಕೋಚ್ ರಾಹುಲ್ ಡ್ರಾವಿಡ್, ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ಆಟಗಾರನನ್ನು ಖರೀದಿಸಲು ಕಾರಣ ಏನೆಂಬು ಬಹಿರಂಗಪಡಿಸಿದ್ದಾರೆ.
ಐಪಿಎಲ್ ಅಪ್ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, “ವೈಭವ್ ಸೂರ್ಯವಂಶಿ ಅವರು ಅದ್ಭುತ ಕೌಶಲವನ್ನು ಹೊಂದಿದ್ದಾರೆ. ಹಾಗಾಗಿ ಅವರನ್ನು ಬೆಳೆಸಲು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅತ್ಯುತ್ತಮ ವಾತಾವರಣವನ್ನು ಕಲ್ಪಸಬೇಕಾಗಿದೆ. ಆರ್ಆರ್ ತಂಡದ ಟ್ರಯಲ್ಸ್ಗೆ ವೈಭವ್ ಬಂದಿದ್ದರು ಹಾಗೂ ಅವರ ಕೌಶಲವನ್ನು ನೋಡಿ ತುಂಬಾ ಖುಷಿಯಾಗಿತ್ತು,” ಎಂದು ತಿಳಿಸಿದ್ದಾರೆ.
IPL 2025: ಹರಾಜಿನಲ್ಲಿ ಸೋಲ್ಡ್, ಅನ್ಸೋಲ್ಡ್ ಆದ ಕರ್ನಾಟಕದ ಆಟಗಾರರಿವರು
13ನೇ ವಯಸ್ಸಿನ ವೈಭವ್ ಸೂರ್ಯವಂಶಿ ಅವರು ಬಿಹಾರ ಸಮಸ್ತಿಪುರದ ಅತ್ಯಂತ ಅದ್ಭುತ ಪ್ರತಿಭೆ. ಅವರು ಇತ್ತೀಚೆಗೆ ಆಸ್ಟ್ರೇಲಿಯಾ-19 ತಂಡದ ವಿರುದ್ದ ನಾಲ್ಕು ದಿನಗಳ ಯೂಥ್ ಟೆಸ್ಟ್ನಲ್ಲಿ ಶತಕ ಸಿಡಿಸಿದ್ದರು. ಭಾರತ ಅಂಡರ್ 19 ತಂಡದ ಪರ ಆಡಿದ್ದ ಅವರು ಕೇವಲ 62 ಎಸೆತಗಳಲ್ಲಿ 104 ರನ್ಗಳನ್ನು ಕಲೆ ಹಾಕಿದ್ದರು. ಕಳೆದ ಶನಿವಾರ ಇವರು ಬಿಹಾರ ತಂಡದ ಪರ ಸೈಯದ್ ಮುಷ್ತಾಲಿ ಟ್ರೋಫಿ ಟೂರ್ನಿಗೂ ಪದಾರ್ಪಣೆ ಮಾಡಿದ್ದರು. ತಮ್ಮ ಪದಾರ್ಪಣೆ ಪಂದ್ಯದಲ್ಲಿಯೂ ಅವರು 6 ಎಸೆತಗಳಲ್ಲಿ 13 ರನ್ಗಳನ್ನು ಗಳಿಸಿದ್ದರು.
“Rajasthan Royals will be a good environment for Vaibhav Suryavanshi” 🩷
— IndianPremierLeague (@IPL) November 26, 2024
Head Coach Rahul Dravid speaks about the youngest Royal and the look of the #RR squad post the #TATAIPLAuction 👌👌#TATAIPL | @rajasthanroyals pic.twitter.com/GuCNpWvgsD
ಕಳೆದ ವರ್ಷ ರಣಜಿ ಟ್ರೋಫಿ ಟೂರ್ನಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ವೈಭವ್ ಸೂರ್ಯವಂಶಿ ಅವರು ಬಿಹಾರ ಪರ ಆಡಿದ್ದ 5 ಪಂದ್ಯಗಳಿಂದ 10ರ ಸರಾಸರಿಯಲ್ಲಿ 41 ರನ್ಗಳನ್ನು ಕಲೆ ಹಾಕಿದ್ದರು. ಆದರೆ, ವಿನೋ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ ಐದು ಪಂದ್ಯಗಳಿಂದ 400 ರನ್ಗಳನ್ನು ಗಳಿಸಿದ್ದರು. ಆ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಅಂದ ಹಾಗೆ ವೈಭವ್ ಸೂರ್ಯವಂಶಿ ರಣಜಿ ಟ್ರೋಫಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ವೇಳೆ ವೈಭವ್ಗೆ 12 ವರ್ಷ ಹಾಗೂ 284 ದಿನಗಳಾಗಿದ್ದವು.
IPL 2025 Auction: ಕೇವಲ 13 ವರ್ಷದ ಹುಡುಗ ಕೋಟ್ಯಧಿಪತಿ! ಆರ್ಆರ್ ಸೇರಿದ ವೈಭವ್ ಸೂರ್ಯವಂಶಿ ಯಾರು?
“ಈ ಹರಾಜಿನಲ್ಲಿ ನಮ್ಮ ಮುಖ್ಯ ಟಾರ್ಗೆಟ್ ಬೌಲರ್ಗಳು,” ಎಂದು ಇದೇ ವೇಳೆ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ. ಅದರಂತೆ ಮೆಗಾ ಹರಾಜಿನಲ್ಲಿ ಜೋಫ್ರಾ ಆರ್ಚರ್, ಆಕಾಶ್ ಮಧ್ವಾಲ್, ತುಷಾರ್ ದೇಶಪಾಂಡೆ, ಫಝಲಕ್ ಫಾರೂಕಿ, ಅಶೋಕ್ ಶರ್ಮಾ ಹಾಗೂ ಕ್ವೇನಾ ಎಂಪಾಕಾ ಅವರನ್ನು ಆರ್ಆರ್ ಖರೀದಿಸಿದೆ. ಇನ್ನು ಸ್ಪಿನ್ ವಿಭಾಗಕ್ಕೆ ಕುಮಾರ್ ಕಾರ್ತಿಕೇಯ, ಮಹೇಶ್ ತೀಕ್ಷಣ, ವಾನಿಂದು ಹಸರಂಗ ಹಾಗೂ ಯಧ್ವೀರ್ ಚರಕ್ ಅವರನ್ನು ತಗೆದುಕೊಂಡಿದೆ.
“ನಾವು ಭಾರತೀಯ ಪ್ರಮುಖ ಬ್ಯಾಟ್ಸ್ಮನ್ಗಳನ್ನು ರಿಟೇನ್ ಮಾಡಿಕೊಳ್ಳುವ ಮೂಲಕ ಮೆಗಾ ಹರಾಜಿಗೆ ಬಂದಿದ್ದೆವು. ನಮಗೆ ಅತ್ಯಂತ ಬಲಿಷ್ಠ ಬೌಲಿಂಗ್ ವಿಭಾಗ ಬೇಕಿತ್ತು ಹಾಗೂ ಇದನ್ನು ಸಾಧಿಸಿದ್ದೇವೆ. ಜೋಫ್ರಾ ಆರ್ಚರ್ ಅವರ ಜೊತೆಗೆ ಎಡಗೈ ವೇಗಿಗಳಾದ ಫಝಲಕ್ ಫಾರೂಕಿ ಹಾಗೂ ಕ್ವೇನಾ ಎಂಫಾಕಾ ಅವರು ವೇಗದ ಬೌಲಿಂಗ್ ವಿಭಾಗಕ್ಕೆ ಅತ್ಯುತ್ತಮ ಸಂಯೋಜನೆಯನ್ನು ತಂದಿದ್ದಾರೆ,” ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.