Monday, 25th November 2024

IPL Auction 2025: ಆರ್‌ಸಿಬಿ ಸೇರಿದ ಭುವನೇಶ್ವರ್‌, ಕೃಣಾಲ್‌

ಜೆಡ್ಡಾ: ಭಾನುವಾರ ನಡೆದ ಮೆಗಾ(IPL Auction 2025) ಹರಾಜಿನಲ್ಲಿ ಸ್ಟಾರ್‌ ಆಟಗಾರರನ್ನು ಕೈ ಬಿಟ್ಟು ಅಭಿಮಾನಿಗಳಿಂದ ಟೀಕೆಗೆ ಒಳಗಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೋಮವಾರ ಅಚ್ಚರಿಯ ಆಯ್ಕೆ ಎಂಬಂತೆ ಕೃಣಾಲ್‌ ಪಾಂಡ್ಯ ಮತ್ತು ಭುವನೇಶ್ವರ್‌ ಕುಮಾರ್‌ ಅವರನ್ನು ಖರೀದಿ ಮಾಡಿದೆ. ಕೃಣಾಲ್‌ಗೆ 5.75 ಕೋಟಿ ರೂ. ನೀಡಿದರೆ, ಭುವನೇಶ್ವರ್‌ಗೆ 10.75 ಕೋಟಿ ನೀಡಿ ಖರೀದಿ ಮಾಡಿದೆ. ಇದೇ ವೇಳೆ ಆರ್‌ಸಿಬಿಯ ನಾಯಕನಾಗಿದ್ದ ಫಾಫ್‌ ಡುಪ್ಲೆಸಿಸ್‌ 2 ಕೋಟಿ ಮೂಲ ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.

ಕೃಣಾಲ್‌ ಪಾಂಡ್ಯ ಕಳೆದ ಆವೃತ್ತಿಯಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಪರ ಆಡಿದ್ದರು. ಅವರನ್ನು 8.25 ಕೋಟಿ ನೀಡಿ ಮಿನಿ ಹರಾಜಿನಲ್ಲಿ ಲಕ್ನೋ ಖರೀದಿ ಮಾಡಿತ್ತು. ಕೆಕೆಆರ್‌ ತಂಡದ ಪರ ಆಡಿದ್ದ ನಿತೀಶ್‌ ರಾಣಾ ಅವರನ್ನು ಆರ್‌ಸಿಬಿಗೆ ಖರೀದಿ ಮಾಡುವ ಅವಕಾಶವಿದ್ದರೂ ಆಸಕ್ತಿ ತೋರಲಿಲ್ಲ. ಕೊನೆಗೆ ಅವರು 4.20 ಕೋಟಿ ರೂ.ಗೆ ರಾಜಸ್ಥಾನ್‌ ರಾಯಲ್ಸ್‌ ತಂಡದ ಪಾಲಾದರು. ಕುಣಾಲ್‌ ಖರೀದಿಗೆ ಆರ್‌ಸಿಬಿ ಜತೆ ರಾಜಸ್ಥಾನ್‌ ತಂಡ ತೀವ್ರ ಪೈಪೋಟಿ ನಡೆಸಿತ್ತು. 5.50 ಕೋಟಿ ತನಕ ಬಿಡ್‌ ಮಾಡಿ ಕೊನೆಗೆ ಹಿಂದೆ ಸರಿಯಿತು. ಎಡಗೈ ಸ್ಪಿನ್‌ ಆಲ್‌ರೌಂಡರ್‌ ಆಗಿರುವ ಕೃಣಾಲ್‌ 127 ಐಪಿಎಲ್‌ ಪಂದ್ಯವಾಡಿ 1647 ರನ್‌ ಮತ್ತು 76 ವಿಕೆಟ್‌ ಕಿತ್ತಿದ್ದಾರೆ.

ಆರ್‌ಸಿಬಿ ಸೇರಿದ ಭುವನೇಶ್ವರ್‌

ಆರ್‌ಸಿಬಿ ಫಿಲ್‌ ಸಾಲ್ಟ್‌ ಬಳಿಕ ತಂಡಕ್ಕೆ ಖರೀದಿ ಮಾಡಿದ ಮತ್ತೊಬ್ಬ ಉತ್ತಮ ಆಟಗಾರನೆಂದರೆ ಟೀಮ್‌ ಇಂಡಿಯಾದ ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌. ಅವರನ್ನು 10.75 ಕೋಟಿ ನೀಡಿ ತನ್ನ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಯಿತು. ಐಪಿಎಲ್‌ನಲ್ಲಿ ಭುವನೇಶ್ವರ್‌ ಉತ್ತಮ ದಾಖಲೆ ಹೊಂದಿದ್ದಾರೆ. 2 ಕೋಟಿ ಮೂಲ ಬೆಲೆಯೊಂದಿಗೆ ಅವರು ಈ ಬಾರಿ ಕಣದಲ್ಲಿದ್ದರು. ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಅನ್‌ ಸೋಲ್ಡ್‌ ಆದರು. ಸದ್ಯ ಸೋಮವಾರದ ಗರಿಷ್ಠ ಬಿಡ್‌ ಮೊತ್ತ ಪಡೆದವರಲ್ಲಿ ಭುವನೇಶ್ವರ್‌ ಕುಮಾರ್‌ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IPL 2025 Auction: ಆರ್‌ಸಿಬಿ ಖರೀದಿಸಿರುವ ರಾಸಿಖ್‌ ಸಲಾಮ್‌ ದರ್‌ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ!

ದಕ್ಷಿಣ ಆಫ್ರಿಕಾದ ಸ್ಟಾರ್‌ ಆಲ್‌ರೌಂಡರ್‌ ಮಾರ್ಕೊ ಜಾನ್ಸೆನ್‌ 7 ಕೋಟಿ ರೂ. ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್‌ ತಂಡ ಸೇರಿದರು. ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡಿದ್ದರು. ಇತ್ತೀಚೆಗೆ ಭಾರತ ವಿರುದ್ಧ ತವರಿನಲ್ಲಿ ಆಡಿದ್ದ ಟಿ20 ಸರಣಿಯ ಪಂದ್ಯವೊಂದರಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ ಕೇವಲ 15 ಎಸೆತದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು.