Saturday, 14th December 2024

ಇಶಾನ್, ಕೀರನ್ ಹೋರಾಟ ವ್ಯರ್ಥ: ಸೂಪರ್ ಓವರ್ ಗೆದ್ದ ಚಾಲೆಂಜರ‍್ಸ್

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ಮುಂಬೈ ತಂಡವನ್ನು ಸೂಪರ್ ಓವರಿನಲ್ಲಿ ಸೋಲಿಸಿದೆ.

ರಾಯಲ್ ಚಾಲೆಂಜರ‍್ಸ್ ನೀಡಿದ ೨೦೧ ರನ್ನುಗಳ ಸವಾಲಿಗೆ, ಆಘಾತಕಾರಿ ಆರಂಭ ಪಡೆದ ಮುಂಬೈಗೆ ಇಶಾನ್ ಕಿಶನ್ ಹಾಗೂ ಕೀರನ್ ಪೋಲಾರ್ಡ್ ಭರ್ಜರಿ ಆಟ ಪ್ರದರ್ಶಿಸಿ, ಗೆಲುವಿನ ಬಾಗಿಲಿಗೆ ತಂದಿಟ್ಟರು. ಮುಂಬೈ ತಂಡದ ಮೊದಲ ನಾಲ್ಕು ವಿಕೆಟ್ 78 ರನ್ನಿಗೆ ಉರುಳಿದ್ದು, ರೋಹಿತ್ ಪಡೆಗೆ ಚೇಸಿಂಗ್ ಮೊತ್ತ ಬಲುದೂರದಂತೆ ಕಂಡಿದ್ದಂತೂ ಸತ್ಯ. ಆದರೆ,
ಇಶಾನ್ ಹಾಗೂ ಕೀರನ್ ಅವರ ಸ್ಪೋಟಕ ಬ್ಯಾಟಿಂಗ್ ಗೆಲುವಿನ ಆಸೆ ಚಿಗುರುವಂತೆ ಮಾಡಿತು. ಇಬ್ಬರ ಬತ್ತಳಿಕೆಯಿಂದ 14 ಸಿಕ್ಸರ್ ಹಾಗೂ ಐದು ಬೌಂಡರಿ ಹೊಮ್ಮಿದ್ದು, ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡದ ಪರ ಪಾದಾರ್ಪಣೆ ಮಾಡಿದ ಇಸುರು ಉಡಾನ ಮತ್ತು ಆಡಂ ಜಂಪಾ ಅವರನ್ನು ದುಬಾರಿಯನ್ನಾಗಿಸಿತು. ಇಬ್ಬರು ಮೂರು ವಿಕೆಟ್ ಕಿತ್ತರೂ, ಇದಕ್ಕಾಗಿ 98 ರನ್ ನೀಡಬೇಕಾಯಿತು.

ಇದಕ್ಕೂ ಮುನ್ನ, ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ರಾಯಲ್ ಚಾಲೆಂರ‍್ಸ್’ಗೆ ಮೂವರ ಅರ್ಧಶತಕ ಬಲ ಸಿಕ್ಕಿತು. ಆರಂಭಿಕರಾದ ದೇವದತ್ ಪಡಿಕ್ಕಲ್ ತಮ್ಮ ಎಂದಿನ ಆಟ ಪ್ರದರ್ಶಿಸಿದರೆ, ಆರನ್ ಫಿಂಚ್ ಫಾರ್ಮಿಗೆ ಬಂದಿದ್ದು, ಕೊಹ್ಲಿಗೆ ಸಂತಸ ತಂದಿತು. ಬಳಿಕ ಮಿ.360 ಎಬಿಡಿ ವಿಲಿರ‍್ಸ್ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ, ಅರ್ಧಶತಕ ಪೇರಿಸಿದ್ದು, ತಂಡದ ಮೊತ್ತ ಇನ್ನೂರರ ಗಡಿ ದಾಟಲು ಶಕ್ತವಾಯಿತು. ಈ ಪಂದ್ಯದಲ್ಲೂ ನಾಯಕ ವಿರಾಟ್ ಕೊಹ್ಲಿ ತಮ್ಮ ಕಳಪೆ ಫಾರ್ಮ್ನಿಂದ ನರಳಬೇಕಾಯಿತು. ಮೂರು ರನ್ ಗಳಿಸಲು 11 ಎಸೆತ ಎದುರಿಸಬೇಕಾಯಿತು. ಅಂತ್ಯದಲ್ಲಿ ಶಿವಂ ದುಬೆ 27 ರನ್ ಗಳಿಸಿ, ವಿಲಿಯರ‍್ಸ್’ಗೆ ಉತ್ತಮ ಸಾಥ್ ನೀಡಿದರು. ಮುಂಬೈ ಪರ ಟ್ರೆಂಟ್ ಬೌಲ್ಟ್ 34 ರನ್ನಿಗೆ ಎರಡು ವಿಕೆಟ್ ಕಿತ್ತರು.

ಐಪಿಎಲ್‌ನಲ್ಲಿ 99 ರನ್ನಿಗೆ ಔಟಾದವರು
2013ರಲ್ಲಿ ಡೆಲ್ಲಿ ವಿರುದ್ದ ವಿರಾಟ್ ಕೊಹ್ಲಿ
2019ರಲ್ಲಿ ಕೋಲ್ಕತಾ ನೈಟ್ ರೈಡರ‍್ಸ್ ವಿರುದ್ದ ಪೃಥ್ವಿ ಶಾ
2020ರಲ್ಲಿ ರಾಯಲ್ ಚಾಲೆಂರ‍್ಸ್ ಬೆಂಗಳೂರು ವಿರುದ್ದ ಇಶಾನ್ ಕಿಶನ್

ಹೆಚ್ಚು ರನ್ ಗಳಿಸಿಯೂ ಟೈ ಆದ ಪಂದ್ಯಗಳು
2020ರಲ್ಲಿ ಮುಂಬೈ ವಿರುದ್ದ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ 201
2015ರಲ್ಲಿ ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ದ ರಾಜಸ್ತಾನ್ ರಾಯಲ್ಸ್ 191

2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕೋಲ್ಕತಾ ನೈಟ್ ರೈಡರ‍್ಸ್ 185

ಸೂಪರ್ ಓವರಿನಲ್ಲಿ ಬುಮ್ರಾ ಸಾಧನೆಗಳು
2017ರಲ್ಲಿ ಗುಜರಾತ್ ಲೈಯನ್ಸ್ ವಿರುದ್ದ 6/0 (ಗೆಲುವು)
2019ರಲ್ಲಿ ಸನ್‌ರೈಸರ‍್ಸ್ ಹೈದರಾಬಾದ್ ವಿರುದ್ದ 8/2 (ಗೆಲುವು)
2020ರಲ್ಲಿ ನ್ಯೂಜಿಲೆಂಡ್ ವಿರುದ್ದ 17/0 (ಗೆಲುವು)
2020ರಲ್ಲಿ ನ್ಯೂಜಿಲೆಂಡ್ ವಿರುದ್ದ 13/1 (ಗೆಲುವು)
2020ರಲ್ಲಿ ರಾಯಲ್ಸ್ ಚಾಲೆಂಜರ‍್ಸ್ ಬೆಂಗಳೂರು ವಿರುದ್ದ 8/0 (ಸೋಲು)

ಸ್ಕೋರ್ ವಿವರ
ರಾಯಲ್ ಚಾಲೆಂಜರ‍್ಸ್ ಬೆಂಗಳೂರು 201/3
ದೇವದತ್ ಪಡಿಕ್ಕಲ್ 54, ಆರನ್ ಫಿಂಚ್ 52, ಎಬಿಡಿ ವಿಲಿಯರ‍್ಸ್ 55 ಅಜೇಯ, ಶಿವಂ ದುಬೆ 27 ಅಜೇಯ.
ಬೌಲಿಂಗ್: ಟ್ರೆಂಟ್ ಬೌಲ್ಟ್ 34/2
ಮುಂಬೈ ಇಂಡಿಯನ್ಸ್ 201/5
ಇಶಾನ್ ಕಿಶನ್ 99, ಕೀರನ್ ಪೋಲಾರ್ಡ್ 60 ಅಜೇಯ.
ಬೌಲಿಂಗ್: ಇಸುರು ಉಡಾನ 45/2
ಪಂದ್ಯಶ್ರೇಷ್ಠ: ಎಬಿಡಿ ವಿಲಿಯರ‍್ಸ್
ಫಲಿತಾಂಶ: ಸೂಪರ್ ಓವರಿನಲ್ಲಿ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿದೆ.