Saturday, 4th January 2025

Gautam Gambhir: ನನಗೂ ಸಾಕಾಯಿತು… ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕೋಚ್‌ ಗಂಭೀರ್‌ ರೋಷಾವೇಶ

ಮೆಲ್ಬರ್ನ್: ಭಾರತ ತಂಡದ(Team India) ಸತತ ಸೋಲಿನಿಂದ ಕಂಗೆಟ್ಟಿರುವ ಪ್ರಧಾನ ಕೋಚ್‌ ಗೌತಮ್ ಗಂಭೀರ್(Gautam Gambhir) ಡ್ರೆಸ್ಸಿಂಗ್ ರೂಮ್‌ನಲ್ಲಿ(India dressing room) ಆಟಗಾರರ ವಿರುದ್ಧ ಕೂಗಾಡಿದ್ದಾರೆ ಎಂದು ವರದಿಯಾಗಿದೆ. ಜತೆಗೆ ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡದಿದ್ದರೆ ತಂಡದಿಂದಲೇ ಕಿತ್ತೊಗೆಯುವುದಾಗಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ತಂಡದ ಕಳಪೆ ಪ್ರದರ್ಶನದ ಬಗ್ಗೆ ಗಂಭೀರ್‌ ವಿರುದ್ಧ ಟೀಮ್‌ ಇಂಡಿಯಾದ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಗಂಭೀರ್‌ ಡ್ರೆಸಿಂಗ್‌ ರೂಮ್‌ನಲ್ಲಿ ನನಗೂ ನೋಡಿ ನೋಡಿ ಸಾಕಾಯ್ತು. ಇದೇ ರೀತಿ ಮುಂದುವರಿದರೆ ಮುಲಾಜಿಲ್ಲದೇ ತಂಡದಿಂದ ಕಿತ್ತು ಹಾಕಬೇಕಾಗುತ್ತದೆ ಎಂದು ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಭಾರೀ ಟೀಕೆಗೆ ಗುರಿಯಾಗಿರುವ ರೋಹಿತ್‌ ಶರ್ಮ(Rohit Sharma) ಹಾಗೂ ವಿರಾಟ್‌ ಕೊಹ್ಲಿಯ(Virat Kohli) ಟೆಸ್ಟ್‌ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಸಿಡ್ನಿ(Sydney Test) ಪಂದ್ಯದಲ್ಲಿಯೂ ಭಾರತ ಸೋತು ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೆ ಅರ್ಹತೆ ಗಳಿಸದಿದ್ದರೆ ಕೊಹ್ಲಿ ಮತ್ತು ರೋಹಿತ್‌ ಟೆಸ್ಟ್‌ನಿಂದ ನಿವೃತ್ತಿಯಾಗುವುದು ಖಚಿತ ಎಂ ಚರ್ಚೆಗಳು ಆರಂಭಗೊಂಡಿವೆ.

ಇದನ್ನೂ ಓದಿ ‌MS DHONI: ಗೋವಾ ಬೀಚ್‌ನಲ್ಲಿ ಹೊಸ ವರ್ಷ ಆಚರಿಸಿದ ಧೋನಿ; ವಿಡಿಯೊ ವೈರಲ್

ರೋಹಿತ್‌ 2024ರಲ್ಲಿ 14 ಟೆಸ್ಟ್‌ ಆಡಿದ್ದು, 26 ಇನ್ನಿಂಗ್ಸ್‌ಗಳಲ್ಲಿ 24.76ರ ಸರಾಸರಿಯಲ್ಲಿ ಕೇವಲ 619 ರನ್‌ ಗಳಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ಸರಣಿಯಲ್ಲಿ ಕೊನೆ ಬಾರಿ ಅರ್ಧಶತಕ ಬಾರಿಸಿರುವ ಅವರು, ಆಸ್ಟ್ರೇಲಿಯಾ ಸರಣಿಯಲ್ಲಿ ಕ್ರಮವಾಗಿ 3, 6, 10, 3 ಮತ್ತು 9 ರನ್‌ ಗಳಿಸಿದ್ದಾರೆ.

ಕೊಹ್ಲಿ ಪರ್ತ್‌ ಟೆಸ್ಟ್‌ನಲ್ಲಿ ಶತಕ ಬಾರಿಸಿದರೂ ಆಡಿದ 10 ಟೆಸ್ಟ್‌ನ 19 ಇನ್ನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು ಕೇವಲ 417 ರನ್‌. ಅವರ ಸರಾಸರಿ ಕೇವಲ 24.52. ಮೊದಲ ಪಂದ್ಯದ ಶತಕ ಹೊರತುಪಡಿಸಿ ಉಳಿದ 6 ಇನ್ನಿಂಗ್ಸ್‌ಗಳಲ್ಲಿ ಅವರು ಕ್ರಮವಾಗಿ 5, 7, 11, 3, 36 ಮತ್ತು 5 ರನ್‌ ಗಳಿಸಿದ್ದಾರೆ. ಈಗಾಗಲೇ ಸುನೀಲ್‌ ಗವಾಸ್ಕರ್‌ ಸೇರಿ ಹಲವು ಮಾಜಿ ಆಟಗಾರರು ನೇರ ಪ್ರಸಾರದ ಕಾಮೆಂಟ್ರಿಯಲ್ಲಿ ಕೊಹ್ಲಿ ಮತ್ತು ರೋಹಿತ್‌ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳುವ ಸಮಯ ಬಂದಿದೆ ಎಂದು ಹೇಳಿದ್ದರು. ಮಾಜಿ ಕೋಚ್‌ ರವಿಶಾಸ್ತ್ರಿ ರೋಹಿತ್‌ ಶೀಘ್ರದಲ್ಲೇ ಟೆಸ್ಟ್‌ನಿಂದ ನಿವೃತ್ತಿ ಪಡೆಯಬಹುದು. ಆದರೆ ಕೊಹ್ಲಿ ಇನ್ನೂ 3-4 ವರ್ಷ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.