ಚೆನ್ನೈ: ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ(Jasprit Bumrah) ಅವರು ಬಾಂಗ್ಲಾದೇಶ(India vs Bangladesh) ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್ನಲ್ಲಿ ಮೂರು ವಿಕೆಟ್ ಕೀಳುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 400 ವಿಕೆಟ್ ಪೂರ್ತಿಗೊಳಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ 6ನೇ ಬೌಲರ್ ಎನಿಸಿಕೊಕೊಂಡು ದಿಗ್ಗಜರಾದ ಕಪಿಲ್ ದೇವ್, ಜಾಹಿರ್ ಖಾನ್, ಜಾವಗಲ್ ಶ್ರೀನಾಥ್ ಜತೆ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ದ್ವಿತೀಯ ದಿನದಾಟವಾದ ಶುಕ್ರವಾರ ಮೊದಲ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶಕ್ಕೆ ಬುಮ್ರಾ ತಮ್ಮ ಘಾತಕ ಬೌಲಿಂಗ್ ದಾಳಿಯ ಮೂಲಕ ಮೊದಲ ಓವರ್ನಲ್ಲಿಯೇ ವಿಕೆಟ್ ಬೇಟೆಯಾಡಿ ಆರಂಭಿಕ ಆಘಾತವಿಕ್ಕಿದರು. 2 ರನ್ ಗಳಿಸಿದ್ದ ಶಾದ್ಮನ್ ಇಸ್ಲಾಂ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮೂರು ವಿಕೆಟ್ ಕೀಳುತ್ತಿದ್ದಂತೆ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 400 ವಿಕೆಟ್ ಕಲೆಹಾಕಿದರು. ಏಕದಿನದಲ್ಲಿ 149, ಟೆಸ್ಟ್ನಲ್ಲಿ160 ಮತ್ತು ಟಿ20ಯಲ್ಲಿ 89 ವಿಕೆಟ್ ಕಿತ್ತಿದ್ದಾರೆ.
ಅಶ್ವಿನ್ ಬಾಂಗ್ಲಾ ವಿರುದ್ಧ 2 ವಿಕೆಟ್ ಕಿತ್ತರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕೂಟದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ವಿಶ್ವದ 2ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇನ್ನು 14 ವಿಕೆಟ್ ಪಡೆದರೆ ನಥನ್ ಲಿಯೋನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದ್ದಾರೆ. ಸದ್ಯ ಅಶ್ವಿನ್ 35 ಟೆಸ್ಟ್ ಪಂದ್ಯಗಳಲ್ಲಿ 174 ವಿಕೆಟ್ ಪಡೆದಿದ್ದಾರೆ. ಅಗ್ರಸ್ಥಾನಿ ಲಿಯೋನ್ 43 ಟೆಸ್ಟ್ ಪಂದ್ಯಗಳಿಂದ 187 ವಿಕೆಟ್ಗಳನ್ನು ಕಬಳಿಸಿದ್ದಾರೆ. ಪ್ಯಾಟ್ ಕಮಿನ್ಸ್ 42 ಟೆಸ್ಟ್ ಪಂದ್ಯ ಪಂದ್ಯಗಳಿಂದ 175 ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ IND vs BAN: ಅಜ್ಜಿಯ ಕ್ರಿಕೆಟ್ ಪ್ರೀತಿಗೆ ನೆಟ್ಟಿಗರು ಕ್ಲೀನ್ ಬೌಲ್ಡ್; ವಿಡಿಯೊ ವೈರಲ್
ಭಾರತ ಪರ ಭರ್ತಿ 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಶ್ವಿನ್ 516 ವಿಕೆಟ್ ಕಿತ್ತು ಭಾರತ ಪರ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ಬೌಲರ್ಗಳ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 619 ವಿಕೆಟ್ ಕಿತ್ತ ಕನ್ನಡಿಗ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ಅಶ್ವಿನ್ 9ನೇ ಸ್ಥಾನಿಯಾಗಿದ್ದಾರೆ.