ನವದೆಹಲಿ: ಬೆನ್ನು ನೋವಿನಿಂದ ಬಳಲುತ್ತಿರುವ ವೇಗಿ ಜಸ್‌ಪ್ರೀತ್ ಬುಮ್ರಾ(Jasprit Bumrah)ಗೆ ಪ್ರವಾಸಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಮತ್ತು ಏಕದಿನ ಸರಣಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಜನವರಿ 22ರಿಂದ 5 ಟಿ20 ಮತ್ತು ಫೆಬ್ರವರಿ 6ರಿಂದ ಏಕದಿನ ಸರಣಿ ನಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ 150 ಹೆಚ್ಚು ಓವರ್‌ಗಳನ್ನು ಎಸೆದಿದ್ದರು. ಅಲ್ಲದೆ ದಾಖಲೆಯ 32 ವಿಕೆಟ್ ಕಿತ್ತು ಮಿಂಚಿದ್ದರು. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬುಮ್ರಾ ಗಾಯಕ್ಕೀಡಾಗಿರುವುದು ತಂಡಕ್ಕೆ ಆತಂಕ ತಂದಿದೆ. ಹೀಗಾಗಿ ಬಿಸಿಸಿಐ ಮುನ್ನೆಚ್ಚರಿಕಾ ಕ್ರಮವಾಗಿ ಅವರಿಗೆ ಇಂಗ್ಲೆಂಡ್ ಸರಣಿಗೆ ವಿಶ್ರಾಂತಿ ನೀಡಲು ಬಯಸಿದೆ ಎಂದು ವರದಿಯಾಗಿದೆ.
ಬುಮ್ರಾ ಅವರ ಗಾಯ ಗ್ರೇಡ್ 1 ವರ್ಗದಲ್ಲಿದ್ದರೆ, ರಿಟರ್ನ್ ಟು ಪ್ಲೇ (RTP) ಮೊದಲು ಕನಿಷ್ಠ ಎರಡು ಮೂರು ವಾರಗಳ ಪುನರ್ವಸತಿ ಮಾಡಬೇಕಿದೆ. ಗ್ರೇಡ್ 2 ಗಾಯದ ಸಂದರ್ಭದಲ್ಲಿ, ಚೇತರಿಕೆಯು ಆರು ವಾರಗಳವರೆಗೆ ಹೋಗಬಹುದು. ಗ್ರೇಡ್ 3 ಗಂಭೀರ ಸ್ವರೂಪದ ಗಾಯದ ಮಾದರಿಯಾಗಿದ್ದು, ಕನಿಷ್ಠ ಮೂರು ತಿಂಗಳ ವಿಶ್ರಾಂತಿ ಮತ್ತು ಪುನರ್ವಸತಿ ಕಾರ್ಯಕ್ರಮಗಳ ಅಗತ್ಯವಿರುತ್ತದೆ. ಸದ್ಯ ಬುಮ್ರಾಗೆ ಯಾಗ ಗ್ರೇಡ್‌ನ ಗಾಯವಾಗಿದೆ ಎಂದು ತಿಳಿದುಬಂದಿಲ್ಲ.
ಆಟಗಾರರ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರಿಗೂ ಇಂಗ್ಲೆಂಡ್ ಸರಣಿ ವಿಶ್ರಾಂತಿ ನೀಡಲು ಬಯಸಿತ್ತು. ಆದರೆ ಆಸೀಸ್‌ನಲ್ಲಿ ಸರಣಿ ಬ್ಯಾಟಿಂಗ್ ವೈಫಲ್ಯ ಕಂಡ ಕಾರಣ ಇವರ ವಿಶ್ರಾಂತಿಯನ್ನು ರದ್ದು ಮಾಡಲಾಗಿದೆ ಎನ್ನಲಾಗಿದೆ. ಭಾರತ ತಂಡ ಮುಂದಿನ 2 ವರ್ಷಗಳ ಅವಧಿಯಲ್ಲಿ ಅಂದರೆ 2026ರ ಡಿಸೆಂಬರ್ವರೆಗೆ ಒಟ್ಟು 34ರಿಂದ 36 ಏಕದಿನ ಪಂದ್ಯಗಳನ್ನು ಆಡಲಿದೆ.