ನವದೆಹಲಿ: ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ಮಾಧ್ಯಮವಾಗಿರುವ ಕ್ರಿಕೆಟ್.ಕಾಮ್.ಎಯು 2024ರ ಆಸ್ಟ್ರೇಲಿಯನ್ ಮೀಡಿಯಾದ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಈ ತಂಡಕ್ಕೆ ಭಾರತ ತಂಡದ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾಗೆ (Jasprit Bumrah) ನಾಯಕತ್ವವನ್ನು ನೀಡಿದೆ. ಅಲ್ಲದೆ ಈ ತಂಡದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಸ್ಥಾನ ನೀಡಲಾಗಿದೆ.
ಪ್ರಸಕ್ತ ವರ್ಷದಲ್ಲಿ ಜಸ್‌ಪ್ರೀತ್ ಬುಮ್ರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಅವರು ಈ ವರ್ಷ ಆಡಿದ್ದ 13 ಟೆಸ್ಟ್ ಪಂದ್ಯಗಳ 26 ಇನಿಂಗ್ಸ್‌ಗಳಿಂದ ಒಟ್ಟು 71 ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ ಅವರು ಐದು ಬಾರಿ 5 ವಿಕೆಟ್‌ಗಳ ಸಾಧನೆಯನ್ನು ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ದ ಸದ್ಯ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುತ್ತಿರುವ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದೀಗ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ ಅವರು 30 ವಿಕೆಟ್‌ಗಳನ್ನು ಕಿತ್ತಿದ್ದಾರೆ.
2024ರಲ್ಲಿ ಅಗ್ರ ದರ್ಜೆಯ ಪ್ರದರ್ಶನ ತೋರಿರುವ ಕಾರಣ ಜಸ್‌ಪ್ರೀತ್ ಬುಮ್ರಾ ಅವರನ್ನು ಆಸ್ಟ್ರೇಲಿಯನ್ ಮೀಡಿಯಾ ಟೆಸ್ಟ್ ತಂಡಕ್ಕೆ ನಾಯಕನನ್ನಾಗಿ ನೇಮಿಸಲಾಗಿದೆ. ಇವರ ಜೊತೆಗೆ ಭಾರತ ತಂಡದಿಂದ ಯಶಸ್ವಿ ಜೈಸ್ವಾಲ್‌ಗೂ ಸ್ಥಾನವನ್ನು ನೀಡಲಾಗಿದೆ. ಜೈಸ್ವಾಲ್ 2024ರಲ್ಲಿ ಆಡಿದ 15 ಟೆಸ್ಟ್ ಪಂದ್ಯಗಳಿಂದ 54.74ರ ಸರಾಸರಿಯಲ್ಲಿ 1478 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಈ ವರ್ಷ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದರಲ್ಲಿ ಅವರು ಮೂರು ಶತಕಗಳು ಹಾಗೂ 9 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ICC Awards 2024: ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿ ಜಸ್‌ಪ್ರೀತ್ ಬುಮ್ರಾ
ಪ್ಯಾಟ್ ಕಮಿನ್ಸ್‌ಗೆ ಸ್ಥಾನವಿಲ್ಲ
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಆಸ್ಟ್ರೇಲಿಯನ್ ಟಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಅವರು ಈ ವರ್ಷ ಆಡಿದ 9 ಟೆಸ್ಟ್ ಪಂದ್ಯಗಳಿಂದ 37 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಅವರು ಎರಡು ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ ಅವರು ಒಂದು ಅರ್ಧಶತಕದೊಂದಿಗೆ 306 ರನ್ ಗಳಿಸಿದ್ದಾರೆ.
What a year from this XI including Jasprit Bumrah who leads the side 🙌
— cricket.com.au (@cricketcomau) December 31, 2024
Full story: https://t.co/zM0nfiRxz9 pic.twitter.com/cn8Zu7zlxw
ಪ್ಯಾಟ್ ಕಮಿನ್ಸ್ ಹೊರತುಪಡಿಸಿ ಅಲೆಕ್ಸ್ ಕೇರಿ ಹಾಗೂ ಜಾಶ್ ಹೇಝಲ್‌ವುಡ್ ಅವರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬೆನ್ ಡಕೆಟ್, ಜೋ ರೂಟ್, ರಚಿನ್ ರವೀಂದ್ರ, ಹ್ಯಾರಿ ಬ್ರೂಕ್, ಕಮಿಂದು ಮೆಂಡಿಸ್, ಮ್ಯಾಟ್ ಹೆನ್ರಿ ಹಾಗೂ ಕೇಶವ್ ಮಹಾರಾಜ್ ಸ್ಥಾನ ಪಡೆದಿದ್ದಾರೆ.
2024ರ ಆಸ್ಟ್ರೇಲಿಯನ್ ಮೀಡಿಯಾ ಟೆಸ್ಟ್ ತಂಡ: ಯಶಸ್ವಿ ಜೈಸ್ವಾಲ್, ಬೆನ್ ಡಕೆಟ್, ಜೋ ರೂಟ್, ರಚಿನ್ ರವೀಂದ್ರ, ಹ್ಯಾರಿ ಬ್ರೂಕ್, ಕಮಿಂದು ಮೆಂಡಿಸ್, ಅಲೆಕ್ಸ್ ಕ್ಯಾರಿ (ವಿ.ಕೀ), ಮ್ಯಾಟ್ ಹೆನ್ರಿ, ಜಸ್‌ಪ್ರೀತ್ ಬುಮ್ರಾ (ನಾಯಕ), ಜಾಶ್ ಹೇಝಲ್‌ವುಡ್, ಕೇಶವ್ ಮಹಾರಾಜ್