Wednesday, 8th January 2025

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ

ದುಬೈ: ಐಸಿಸಿ ಡಿಸೆಂಬರ್‌ ತಿಂಗಳ ಆಟಗಾರನ ಪ್ರಶಸ್ತಿಗೆ(ICC Player of the Month) ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿ ಬಿಡುಗಡೆಗೊಂಡಿದೆ ಅಚ್ಚರಿ ಎಂದರೆ ಈ ಬಾರಿ ಮೂರು ಆಟಗಾರರು ಕೂಡ ಬೌಲರ್‌ಗಳಾಗಿದ್ದಾರೆ. ಕಳೆದ ಬೋರ್ಡರ್‌-ಗಾವಸ್ಕರ್‌ ಟ್ರೋಫಿ ಸರಣಿಯಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶಿಸಿದ ಟೀಮ್‌ ಇಂಡಿಯಾ ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah), ಆಸ್ಟ್ರೇಲಿಯದ ನಾಯಕ ಪ್ಯಾಟ್‌ ಕಮಿನ್ಸ್‌ ಮತ್ತು ದಕ್ಷಿಣ ಆಫ್ರಿಕಾದ ಸೀಮರ್‌ ಡೇನ್‌ ಪ್ಯಾಟರ್ಸನ್‌ ರೇಸ್‌ನಲ್ಲಿರುವ ಆಟಗಾರರು.

ಬುಮ್ರಾ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ 32 ವಿಕೆಟ್‌ ಉರುಳಿಸಿದ್ದರು. ಡಿಸೆಂಬರ್‌ನಲ್ಲಿ ಆಡಲಾದ 3 ಟೆಸ್ಟ್‌ಗಳಲ್ಲಿ 22 ವಿಕೆಟ್‌ ಕೆಡವಿದ್ದರು. ಪ್ಯಾಟ್‌ ಕಮಿನ್ಸ್‌ ಡಿಸೆಂಬರ್‌ ತಿಂಗಳ ಟೆಸ್ಟ್‌ ಪಂದ್ಯಗಳಲ್ಲಿ 17 ವಿಕೆಟ್‌ ಕಿತ್ತಿದ್ದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಕಮಿನ್ಸ್‌, ಮೆಲ್ಬರ್ನ್ ಪಂದ್ಯದಲ್ಲಿ 49 ಹಾಗೂ 41 ರನ್‌ ಮಾಡಿದ್ದರು. ದಕ್ಷಿಣ ಆಫ್ರಿಕಾದ ಡೇನ್‌ ಪ್ಯಾಟರ್ಸನ್‌ ಶ್ರೀಲಂಕಾ ವಿರುದ್ಧದ 2 ಟೆಸ್ಟ್‌ಗಳಲ್ಲಿ 13 ವಿಕೆಟ್‌ ಉರುಳಿಸಿದ್ದರು.

ಮಹಿಳಾ ವಿಭಾಗದಲ್ಲಿ ಭಾರತದ ಆರಂಭಿಕ ಆಟಗಾರ್ತಿ, ಉಪನಾಯಕಿ ಸ್ಮೃತಿ ಮಂದನಾ, ಆಸ್ಟ್ರೇಲಿಯಾದ ಅನ್ನಾಬೆಲ್‌ ಸುದರ್‌ಲ್ಯಾಂಡ್‌ ಹಾಗೂ ದಕ್ಷಿಣ ಆಫ್ರಿಕಾದ ನಾನ್ಕುಲುಲೇಕೊ ಮ್ಲಾಬಾ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಮಂದನಾ, ಡಿಸೆಂಬರ್‌ನಲ್ಲಿ ಆಡಿದ 6 ಏಕದಿನದಲ್ಲಿ 45ರ ಸರಾಸರಿಯಲ್ಲಿ 270ರನ್‌ ಗಳಿಸಿದ್ದಾರೆ. ಮೂರು ಟಿ20ಯಲ್ಲಿ 64.33ರ ಸರಾಸರಿಯಲ್ಲಿ 193ರನ್‌ ಕಲೆಹಾಕಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿಗೆ ಬುಮ್ರಾ ಉಪನಾಯಕ?

ಮುಂದಿನ ತಿಂಗಳು ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ(Champions Trophy 2025) ಟೂರ್ನಿಗೆ ಭಾರತ ತಂಡವನ್ನು ಜನವರಿ 12 ರಂದು ಪ್ರಕಟಿಸುವ ಸಾಧ್ಯತೆ ಇದೆ. ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ತಂಡದ ಉಪನಾಯಕರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಸಿಡ್ನಿ ಟೆಸ್ಟ್​ ವೇಳೆ ಬೆನ್ನುನೋವಿನ ಸಮಸ್ಯೆ ಎದುರಿಸಿದ ಕಾರಣ ಬುಮ್ರಾ ತವರಿನ ಇಂಗ್ಲೆಂಡ್‌ ಎದುರಿನ ಟಿ20 ಮತ್ತು ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

ಭಾರತದ ಪಂದ್ಯಗಳು ತಟಸ್ಥ ತಾಣವಾದ ದುಬೈನಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯ 2025ರ ಫೆಬ್ರವರಿ 23ರಂದು ದುಬೈನಲ್ಲಿ ನಡೆಯಲಿದೆ. ಫೆಬ್ರವರಿ 19ರಂದು ಆತಿಥೇಯ ಹಾಗೂ ಹಾಲಿ ಚಾಂಪಿಯನ್​ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವೆ ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

Leave a Reply

Your email address will not be published. Required fields are marked *