Monday, 6th January 2025

Jasprit Bumrah: ಭಾರತ ತಂಡಕ್ಕೆ ಆಘಾತ; ಅರ್ಧದಲ್ಲೇ ಪಂದ್ಯ ತೊರೆದು ಆಸ್ಪತ್ರೆಗೆ ತೆರಳಿದ ಬುಮ್ರಾ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದ ಬೆನ್ನಲ್ಲೇ ದೊಡ್ಡ ಆಘಾತ ಕೂಡ ಎದುರಾಗಿದೆ. ನಾಯಕ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಗಾಯದ ಸಮಸ್ಯೆಯಿಂದ ಪಂದ್ಯದ ಮಧ್ಯದಲ್ಲೇ ಆಸ್ಪತ್ರೆ ಸೇರಿದ್ದಾರೆ. ಬುಮ್ರಾ ಮೈದಾನ ತೊರೆದು ಕಾರು ಹತ್ತಿ ಆಸ್ಪತ್ರೆಗೆ ಹೊರಟಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹೀಗಾಗಿ ಅವರಿಗೆ ಗಂಭೀರ ಗಾಯವಾಗಿರುವ ಅನುಮಾನ ಕಾಡಿದೆ.

ದ್ವಿತೀಯ ದಿನದಾಟದಲ್ಲಿ 8 ಓವರ್‌ ಬೌಲಿಂಗ್‌ ದಾಳಿ ನಡೆಸಿದ ಬುಮ್ರಾ ಗಾಯಕ್ಕೆ ತುತ್ತಾದರು. ಸುಮಾರು ಅರ್ಧ ಗಂಟೆ ವೈದ್ಯಕೀಯ ತಂಡದೊಂದಿಗೆ ಚಿಕಿತ್ಸೆ ಪಡೆದರೂ ಚೇತರಿಕೆ ಕಾಣದ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಬುಮ್ರಾ ಗಾಯದ ಬಗ್ಗೆ ಯಾವುದೇ ಅಪ್‌ಡೇಟ್‌ ಹೊರಬಿದ್ದಿಲ್ಲ. ಬುಮ್ರಾ ಅನುಪಸ್ಥಿತಿಯಲ್ಲಿ ವಿರಾಟ್‌ ಕೊಹ್ಲಿ ತಂಡವನ್ನು ಮುನ್ನಡೆಸಿದರು. ಬುಮ್ರಾ ಹೊರಗುಳಿಯುತ್ತಿರುವುದು ಟೀಂ ಇಂಡಿಯಾಗೆ ಆತಂಕ ತಂದಿದೆ.

4ರನ್‌ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ಭಾರತ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಒತ್ತು ನೀಡಿದಂತಿದೆ. ಯಶಸ್ವಿ ಜೈಸ್ವಾಲ್‌ ಅವರು ಮಿಚೆಲ್‌ ಸ್ಟಾರ್ಕ್‌ ಎಸೆದ ಮೊದಲ ಓವರ್‌ನಲ್ಲೇ 4 ಬೌಂಡರಿ ಬಾರಿಸಿ 16 ರನ್‌ ಕಲೆ ಹಾಕಿದರು. ಸದ್ಯ ಭಾರತ ವಿಕೆಟ್‌ ನಷ್ಟವಿಲ್ಲದೆ 30ರನ್‌ ಗಡಿ ದಾಟಿದೆ.

ದ್ವಿತೀಯ ದಿನದಾಟದಲ್ಲಿ ಬುಮ್ರಾ ಅವರು ದಿನದ ಎರಡನೇ ಓವರ್‌ನಲ್ಲಿ ಮಾರ್ನಸ್ ಲಬುಶೇನ್‌ ವಿಕೆಟ್‌ ಕೀಳುವ ಮೂಲಕ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಭಾರತದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವೇಳೆ ಅವರು ಭಾರತ ತಂಡದ ಮಾಜಿ ನಾಯಕ, ಸ್ಪಿನ್ನರ್‌ ಬಿಷನ್‌ ಸಿಂಗ್‌ ಬೇಡಿ ಅವರ ದಾಖಲೆ ಹಿಂದಿಕ್ಕಿದರು. ಬಿಷನ್‌ ಸಿಂಗ್‌ ಬೇಡಿ ಅವರು 1977/78 ರ ಸರಣಿಯ ವೇಳೆ 31 ವಿಕೆಟ್‌ ಕಿತ್ತಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇದೀಗ ಬುಮ್ರಾ 32 ವಿಕೆಟ್‌ ಕಿತ್ತು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

 9 ರನ್‌ ಗಳಿಸಿದ್ದಲ್ಲಿಂದ ಶನಿವಾರ ದ್ವಿತೀಯ ದಿನದಾಟ ಆರಂಭಿಸಿದ ಆಸೀಸ್‌ಗೆ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಮತ್ತು ಮೊಹಮ್ಮದ್‌ ಸಿರಾಜ್‌ ಘಾತಕ ಬೌಲಿಂಗ್‌ ದಾಳಿ ಮೂಲಕ ಆಘಾತವಿಕ್ಕಿದರು. ಉಭಯ ಆಟಗಾರರ ಬೌಲಿಂಗ್‌ ದಾಳಿಗೆ ಆಸೀಸ್‌ 181 ರನ್‌ಗೆ ಆಲೌಟ್‌ ಆಯಿತು.