Monday, 25th November 2024

Jay Shah: ಮೂರನೇ ಮಗುವಿನ ತಂದೆಯಾದ ಖುಷಿಯಲ್ಲಿ ಜಯ್‌ ಶಾ

ಅಹಮದಾಬಾದ್‌: ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್‌ ಶಾ(Jay Shah) ಇದೇ ಡಿಸೆಂಬರ್ 1ರಂದು ಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನವೇ ಅವರು ಮೂರನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ಹೌದು ಜಯ್ ಶಾ ಪತ್ನಿ ರಿಷಿತಾ ಪಟೇಲ್(Rishita Patel) ನ.24(ಭಾನುವಾರ) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ಜಯ್‌ ಶಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇದೀಗ ಮನೆಗೆ ಹೊಸ ಅತಿಥಿಯ ಆಗಮನದಿಂದ ಮನೆಯಲ್ಲಿ ಸಂತಸ ಮನೆಮಾಡಿದೆ.

ಅಕ್ಟೋಬರ್ 2019 ರಿಂದ ಬಿಸಿಸಿಐ ಗೌರವ ಕಾರ್ಯದರ್ಶಿಯಾಗಿ ಮತ್ತು ಜನವರಿ 2021 ರಿಂದ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಜಯ್‌ ಶಾ ಇದೇ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಮುಂದಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಈವರೆಗೆ ಅಧ್ಯಕ್ಷರಾಗಿದ್ದ ಗ್ರೇಗ್‌ ಬಾರ್ಕ್ಲಿ ಅವರು ಮುಂದಿನ ಅವಧಿಗೆ ಮುಂದುವರಿಯದಿರುಲು ನಿರ್ಧರಿಸಿದ್ದಾರೆ. ಹೀಗಾಗಿ ಅಧ್ಯಕ್ಷೀಯ ಪದವಿಗೆ ನಡೆದ ಚುನಾವಣೆಯಲ್ಲಿ ಜಯ್‌ ಶಾ ಅವರು ಏಕೈಕ ಸ್ಪರ್ಧಿಯಾಗಿದ್ದರು.

ಇದನ್ನೂ ಓದಿ Rohit Sharma: ಪರ್ತ್‌ನಲ್ಲಿ ಪಂದ್ಯ ವೀಕ್ಷಿಸಿ, ಅಭ್ಯಾಸ ಆರಂಭಿಸಿದ ರೋಹಿತ್‌ ಶರ್ಮ

ಜಯ್​ ಶಾ ನಾಯಕತ್ವವು ವಿಶ್ವಾದ್ಯಂತ ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದೆ. ಐಸಿಸಿ ಪುರುಷರ ವಿಶ್ವಕಪನ್ನು ಅವರು ಹೊಸ ಎತ್ತರಕ್ಕೆ ಮುನ್ನಡೆಸಿದ್ದಾರೆ. ಲಿಂಗ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್​ನಲ್ಲಿ ಪುರುಷ ಮತ್ತು ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ಪದ್ಧತಿಯನ್ನು ಕೂಡ ಇವರ ಕಾರ್ಯವಧಿಯಲ್ಲಿ ಜಾರಿಗೆ ತರಲಾಗಿತ್ತು. ಮತ್ತು ಮಹಿಳಾ ಪ್ರೀಮಿಯರ್ ಲೀಗ್‌ನ ರಚನೆ, ಒಲಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆ, ಹೀಗೆ ಅನೇಕ ಕಾರ್ಯಗಳ ಮೂಲಕ ಕ್ರಿಕೆಟ್​ ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡಿದ್ದಾರೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರಾದ ಅತ್ಯಂತ ಕಿರಿಯ ಎನ್ನುವ ಹೆಗ್ಗಳಿಕೆಯೂ ಜಯ್​ ಶಾ ಅವರದ್ದಾಗಿದೆ. ಭಾರತದ ದೇಶೀಯ ಕ್ರಿಕೆಟ್ ಭವಿಷ್ಯವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಜಯ್​ ಶಾ ಹಲವು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ.