Wednesday, 27th November 2024

ಕ್ರಿಕೆಟ್ ಕ್ಲಬ್​ನಲ್ಲಿ ಧಾರ್ಮಿಕ ಚುಟುವಟಿಕೆ: ಭಾರತ ಮಹಿಳಾ ತಂಡದ ಆಟಗಾರ್ತಿಯ ಸದಸ್ಯತ್ವ ರದ್ದು

ಮುಂಬಯಿ: ಭಾರತ ಮಹಿಳಾ ತಂಡದ ಸ್ಟಾರ್‌ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌(jemimah rodrigues) ಸಂಕಷ್ಟವೊಂದರಲ್ಲಿ ಸಿಲುಕಿದ್ದಾರೆ. ಅವರ ತಂದೆ(jemimah rodrigues father) ಮುಂಬೈನ ಅತ್ಯಂತ ಹಳೆಯ ಕ್ರಿಕೆಟ್‌ ಕ್ಲಬ್‌ಗಳಲ್ಲಿ ಒಂದಾದ ಖಾರ್ ಜಿಮ್‌ಖಾನಾದಲ್ಲಿ(Mumbai’s Khar Gymkhana) ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿರುವ ರೋಡ್ರಿಗಸ್ ಸದಸ್ಯತ್ವವನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿರುವುದಾಗಿ ಕ್ಲಬ್ ಅಧಿಕಾರಿಗಳು ಮತ್ತು ಸಮಿತಿಯ ಸದಸ್ಯರು ತಿಳಿಸಿದ್ದಾರೆ.

ಜಿಮ್​ಖಾನಾ ಕ್ಲಬ್​ನಲ್ಲಿ ಜೆಮಿಮಾ ರೋಡ್ರಿಗಸ್ ಸದಸ್ಯರಾಗಿದ್ದರು. ಆದರೆ ಅವರ ತಂದೆ ಇವಾನ್ ರೋಡ್ರಿಗಸ್‌(Ivan Rodrigues) ಈ ಸದಸ್ಯತ್ವವನ್ನು ದುರಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೆ ಕ್ಲಬ್​ನ ಜಾಗವನ್ನು ಧಾರ್ಮಿಕ ಚಟುವಟಿಕೆಗಳಿಗಾಗಿ ಬಳಸುತ್ತಿದ್ದರು. ಮತ್ತು ಜನರನ್ನು ಮತಾಂತರಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಕೆಲವು ಸದಸ್ಯರು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಜೆಮಿಮಾ ರೋಡ್ರಿಗಸ್‌ ಸದಸ್ಯತ್ವವನ್ನು ರದ್ದು ಮಾಡಲಾಗಿದೆ. ಈ ಘಟನೆ ಬಳಿಕ ಕೆಲ ಸಂಘಟನೆಗಳು ಜೆಮಿಮಾ ರೋಡ್ರಿಗಸ್ ಅವರನ್ನು ಭಾರತ ತಂಡದಿಂದಲೂ ತೆಗೆದು ಹಾಕುವಂತೆ ಆಗ್ರಹಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಿತಿಯ ಸದಸ್ಯರಾದ ಶಿವ್ ಮಲ್ಹೋತ್ರಾ, ʼಜೆಮಿಮಾ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಆಕೆ ದೇಶಕ್ಕೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. ಆಕೆಯ ತಂದೆ ಕಳೆದೊಂದು ವರ್ಷದಲ್ಲಿ ಮಗಳ ಹೆಸರಿನಲ್ಲಿ ಕ್ಲಬ್‌ನ ಸಭಾಂಗಣವನ್ನು ವೈಯಕ್ತಿಕವಾಗಿ ಕಾಯ್ದಿರಿ 35 ಧಾರ್ಮಿಕ ಸಭೆಗಳನ್ನು ನಡೆಸಿದ್ದಾರೆ. ಬ್ರದರ್ ಮ್ಯಾನುಯೆಲ್ ಮಿನಿಸ್ಟ್ರೀಸ್ ಎಂಬ ಸಂಸ್ಥೆ ಇಲ್ಲಿ ನಿಯಮಿತ ಸಭೆಗಳನ್ನು ನಡೆಸುತ್ತಿತ್ತು. ಸಭೆಯಲ್ಲಿ ಮತಾಂತರಿಸಲು ಪ್ರಯತ್ನಿಸುತ್ತಿರುವ ಬಗ್ಗೆ ದೂರುಗಳ ಬಂದ ಕಾರಣ ಈ ಪ್ರಮ ಕೈಗೊಳ್ಳಲಾಗಿದೆʼ ಎಂದು ಮಲ್ಹೋತ್ರಾ ಹೇಳಿದರು.

ಇದನ್ನೂ ಓದಿ IND vs NZ 2nd Test: ಕಿವೀಸ್‌ ಕಟ್ಟಿಹಾಕಲು ಸ್ಪಿನ್‌ ಟ್ರ್ಯಾಕ್‌ ಮೊರೆ ಹೋದ ಭಾರತ?

ಇಂಡಿಯನ್ ಎಕ್ಸ್​ಪ್ರೆಸ್ ವರದಿ ಪ್ರಕಾರ, ಜೆಮಿಮಾಗೆ 3 ವರ್ಷಗಳ ಗೌರವ ಸದಸ್ಯತ್ವ ನೀಡಲಾಗಿತ್ತು. ಇದೀಗ ಈ ಸದಸ್ಯತ್ವವನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಒಮ್ಮತದ ನಿರ್ಣಯ ಅಂಗೀಕರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಲಬ್‌ನ ಮ್ಯಾನೇಜಿಂಗ್ ಕಮಿಟಿ ಸದಸ್ಯ ಶಿವ ಮಲ್ಹೋತ್ರಾ ತಿಳಿಸಿದ್ದಾರೆ.

ಭಾರತ ತಂಡದ ಉದಯೋನ್ಮುಖ ಬ್ಯಾಟರ್‌ ಆಗಿರುವ 24 ವರ್ಷದ ಜೆಮಿಮಾ ರೋಡ್ರಿಗಸ್‌ ಭಾರತ ಪರ 30 ಏಕದಿನ ಪಂದ್ಯಗಳಿಂದ 710 ರನ್‌, ಟೆಸ್ಟ್‌ನಲ್ಲಿ 3 ಪಂದ್ಯವನ್ನಾಡಿ 235 ರನ್‌, ಟಿ20 ಯಲ್ಲಿ 104 ಪಂದ್ಯಗಳಿಂದ 2,142 ರನ್‌ ಬಾರಿಸಿದ್ದಾರೆ. ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 19 ಅರ್ಧಶತಕ ಗಳಿಸಿದ್ದಾರೆ.