ನವದೆಹಲಿ: ಇಲ್ಲಿನ ಆರ್ಮಿ ಪೋಲೋ ಮತ್ತು ರೈಡಿಂಗ್ ಸೆಂಟರ್‌ನಲ್ಲಿ ಭಾನುವಾರ ಮುಕ್ತಾಯವಾಗಿದ್ದ 2024ರ ರಾಷ್ಟ್ರೀಯ ಕಿರಿಯರ ಈಕ್ವೆಸ್ಟ್ರಿಯನ್ ಚಾಂಪಿಯನ್‌ಶಿಪ್‌ನಲ್ಲಿ (JNEC 2024) ಕರ್ನಾಟಕದ ಇಶಾನ್ ಸುಂದರಂ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವೈಬರ್ಟಿ ಕೆ.ಜಿಯ ರೈಡಿಂಗ್ ಫೇಮ್ ಆಫ್ ಚಿಲ್ಡ್ರನ್ II ಡ್ರೆಸ್ಸೇಜ್ ವೈಯಕ್ತಿಕ ವಿಭಾಗದಲ್ಲಿ 71.20 ಅಂಕಗಳನ್ನು ಕಲೆ ಹಾಕುವ ಮೂಲಕ ಅವರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ತಮ್ಮ ತಂಡ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ಕೇವಲ ಒಂದು ದಿನದ ಬಳಿಕ ಇಶಾನ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಅತ್ಯಂತ ವಿಶೇಷವಾಗಿದೆ.
ಮತ್ತೊಂದೆಡೆ ಚೇತಕ್ ಈಕ್ವೆಸ್ಟ್ರಿಯನ್ ಸ್ಪೋರ್ಟ್ಸ್ ಅಕಾಡೆಮಿ ಎರಡು ಗೆಲುವು ಪಡೆದಿದೆ. ಅಭಿರಾಜ್ ಬನ್ಸಾಲ್, ಅವತಾರಣ್ಯ ಬೈಡ್, ಬಿ ಹಾಶಿನಿ ಮತ್ತು ಅಮ್ರಾ ಸಿಂಗ್ ಅವರ ಸಂಯೋಜಿತ ಪ್ರಯತ್ನದಿಂದ ಚೇತಕ್ ಅಕಾಡೆಮಿಯು ಎರಡು ರೋಚಕ ಸುತ್ತಿನ ಸ್ಪರ್ಧೆಯ ಬಳಿಕ ಚಿಲ್ರ್ಡನ್ II ಜಂಪಿಂಗ್ ತಂಡದ ಪ್ರಶಸ್ತಿಯನ್ನು ಪಡೆದುಕೊಂಡಿತು.
ಅಕಾಡೆಮಿಯ ಯಶಸ್ಸು ಜೂನಿಯರ್ ಡ್ರೆಸ್ಸೇಜ್ ಫ್ರೀಸ್ಟೈಲ್ ಟು ಮ್ಯೂಸಿಕ್ ವಿಭಾಗಕ್ಕೆ ವಿಸ್ತರಿಸಿತು. ಇದರ ನಡುವೆ ಚಿಲ್ಡ್ರನ್ II ಜಂಪಿಂಗ್ ವೈಯಕ್ತಿಕ ವಿಭಾಗದಲ್ಲಿ ಅರ್ಷದ್ ತನ್ನ ಕುದುರೆ ತಾರಾದಲ್ಲಿ ಕೇವಲ 27.51 ಸೆಕೆಂಡುಗಳಲ್ಲಿ ಕೋರ್ಸ್ ಅನ್ನು ಪೂರ್ಣಗೊಳಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.
ಭಾರತೀಯ ಈಕ್ವೆಸ್ಟ್ರಿಯನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕರ್ನಲ್ ಜೈವೀರ್ ಸಿಂಗ್ ಮಾತನಾಡಿ, “ಈ ವಾರಾಂತ್ಯದ ಗಮನಾರ್ಹ ಪ್ರದರ್ಶನಗಳು ನಮ್ಮ ಯುವ ಕುದುರೆ ಸವಾರಿ ಸಮುದಾಯದಲ್ಲಿನ ಅಪಾರ ಸಾಮರ್ಥ್ಯ, ಸಮರ್ಪಣೆ ಮತ್ತು ಪ್ರತಿಭೆಯನ್ನು ಎತ್ತಿ ತೋರಿಸಿವೆ. ಚೇತಕ್ ಅಕಾಡೆಮಿಯ ರೋಮಾಂಚಕ ಪ್ರದರ್ಶನ-ಜಂಪಿಂಗ್ ಸಾಹಸಗಳು, ಈ ಸವಾರರು ತಮ್ಮ ವೈಯಕ್ತಿಕ ಕೌಶಲಗಳನ್ನು ಪ್ರದರ್ಶಿಸಿದ್ದಾರೆ. ಮಾತ್ರವಲ್ಲದೆ ದೇಶದಾದ್ಯಂತ ಕುದುರೆ ಸವಾರಿ ಪ್ರತಿಭೆಯ ಬೆಳವಣಿಗೆಯ ಆಳವನ್ನು ಇದು ಒತ್ತಿ ಹೇಳುತ್ತದೆ. ಅವರ ಪ್ರದರ್ಶನಗಳು ಭಾರತದಲ್ಲಿ ಕುದುರೆ ಸವಾರಿ ಕ್ರೀಡೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತವೆ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ಕ್ರೀಡಾಪಟುಗಳಿಗೆ ಉಜ್ವಲ ಭವಿಷ್ಯಕ್ಕಾಗಿ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತವೆ.
ಶನಿವಾರ ಚೆನ್ನೈ ಈಕ್ವಿಟೇಶನ್ ಕೇಂದ್ರ ತಂಡವು ಮಕ್ಕಳ ಡ್ರೆಸ್ಸೇಜ್ ತಂಡದ ವಿಭಾಗದಲ್ಲಿ ಹಶಿನಿ ಬಿ, ಕೆವಿನ್ ಗೇಬ್ರಿಯಲ್, ಪುನವ್ ಎಸ್ ಮತ್ತು ಇಶಾನ್ ಅವರ ಪ್ರತಿಭಾವಂತ ಕ್ವಾರ್ಟೆಟ್‌ನೊಂದಿಗೆ ಉನ್ನತ ಸ್ಥಾನವನ್ನು ಪಡೆದು ಯಶಸ್ವಿ ದಿನವನ್ನು ಪ್ರಾರಂಭಿಸಿತ್ತು. ಈ ವೇಗವನ್ನು ಕಾಯ್ದುಕೊಂಡು, ಕೇಂದ್ರವು ಜೂನಿಯರ್ ಡ್ರೆಸ್ಸೇಜ್ ಟೀಮ್ ಈವೆಂಟ್‌ನಲ್ಲಿ ಮೊದಲ ಸ್ಥಾನ ಸೇರಿದಂತೆ ಎರಡು ಗೆಲುವುಗಳನ್ನು ಸಾಧಿಸಿತು. ಮಿರಾಯಾ ಆರ್ ದಾದಾಭೋಯ್, ಸಂಸ್ಕಾರ್ ರಾಥೋಡ್, ಆದ್ಯಾ ಇಶಾ ಮತ್ತು ಅನಿಕಾ ಖನ್ನಾ ಅವರ ಸಂಯೋಜಿತ ಪ್ರಯತ್ನಗಳಿಂದ ಈ ತಂಡ ಯಶಸ್ವಿಯಾಯಿತು.
ಜೂನಿಯರ್ ಜಂಪಿಂಗ್ ವೈಯಕ್ತಿಕ ಸ್ಪರ್ಧೆಯಲ್ಲಿ ರಣಬೀರ್ ಸಿಂಗ್ ಧಿಲ್ಲೋನ್ ಅಸಾಧಾರಣ ಕೌಶಲ ಮತ್ತು ವೇಗವನ್ನು ಪ್ರದರ್ಶಿಸಿದರು, ಚಿನ್ನದ ಪದಕವನ್ನು ಪಡೆಯಲು ಕೋರ್ಸ್ ಅನ್ನು ವೇಗವಾಗಿ ಪೂರ್ಣಗೊಳಿಸಿದರು. ಭುವನ್ ಮತ್ತು ವೇದ್ ಶರ್ಮಾ ಸರ್ಕಾರ್ ತಮ್ಮ ಬಲವಾದ ಪ್ರದರ್ಶನಗಳ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ.
ಚಾಂಪಿಯನ್ ಇಶಾನ್ ಸುಂದರಂಗೆ ಕ್ರೀಡಾ ಮನೋವಿಜ್ಞಾನಿ ಸಾತ್ವಿಕ್ ಶ್ಲಾಘನೆ
ಕನ್ನಡಿಗ ಇಶಾನ್ ಸುಂದರಂ ಸಾಧನೆಯನ್ನು ಅವರ ಕ್ರೀಡಾ ಮನೋವಿಜ್ಞಾನಿ ಸಾತ್ವಿಕ್ ಜಿ ಯು ಅವರು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
“ಏಳು ಹಂತದ ಸ್ಪರ್ಧೆಯಲ್ಲಿ ಅನುಭವಿಗಳ ಎದುರು ಸ್ಪರ್ಧಿಸುವುದೇ ಕಷ್ಟ, ಇಂಥಾ ಸನ್ನಿವೇಶದಲ್ಲಿ ಇಶಾನ್ ಗೆದ್ದಿದ್ದಾನೆ. ಕೇವಲ 12 ವರ್ಷ ವಯಸ್ಸಿಗೆ ಚಾಂಪಿಯನ್ ಆಗುವುದರ ಮೂಲಕ ಇಶಾನ್ ತನ್ನ ಛಾಪನ್ನು ಮೂಡಿಸಿದ್ದಾನೆ. ಇಶಾನ್ ಇಂಡೋನೇಷ್ಯಾದಲ್ಲಿ ನಡೆಯಲಿರುವ ಜಂಪಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆ ಗಳಿಸಿಕೊಂಡಿರುವುದು ವಿಶೇಷ. ಇಶಾನ್ ಮಾಡಿರುವ ಈ ಸಾಧನೆಯಿಂದ ನನಗೆ ಖುಷಿ ತಂದಿದೆ. ಅವನ ಕ್ರೀಡಾ ಮನೋವಿಜ್ಞಾನಿಯಾಗಿ (sports psychologist) ಕಾರ್ಯನಿರ್ವಹಿಸುತ್ತಿರುವುದು ನನಗೆ ಹೆಮ್ಮೆಯನ್ನು ತಂದಿದೆ,” ಎಂದು ಕ್ರೀಡಾ ಮನೋವಿಜ್ಞಾನಿ ಜಿ ಯು ಸಾತ್ವಿಕ್ ಸಂತಸ ವ್ಯಕ್ತಪಡಿಸಿದ್ದಾರೆ.