ಕ್ರೈಸ್ಟ್‌ಚರ್ಚ್: ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್(Joe Root) ಅವರು ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್(New Zealand vs England 1st Test) ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರ ವಿಶ್ವ ದಾಖಲೆಯೊಂದನ್ನು ಮುರಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಹ್ಯಾಗ್ಲೆ ಓವಲ್‌ನಲ್ಲಿ ಭಾನುವಾರ ಮುಕ್ತಾಯ ಕಂಡ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 8 ವಿಕೆಟ್‌ಗಳ ಗೆಲುವು ಸಾಧಿಸಿತು. 103 ರನ್‌ಗಳ ಗೆಲುವಿನ ಗುರಿ ಬೆನ್ನಟುವ ವೇಳೆ ರೂಟ್ ಅಜೇಯ 23 ರನ್ ಬಾರಿಸಿದರು. ಇದೇ ವೇಳೆ ಅವರು ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಸಚಿನ್ ತೆಂಡೂಲ್ಕರ್(1625) ದಾಖಲೆಯನ್ನು ಹಿಂದಿಕ್ಕಿದರು. ಸದ್ಯ ರೂಟ್ 1630* ರನ್ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಮಾಜಿ ಆಟಗಾರ ಅಲೆಸ್ಟರ್ ಕುಕ್(1611) ಮೂರನೇ ಸ್ಥಾನದಲ್ಲಿದ್ದಾರೆ. ಜೋ ರೂಟ್ ಆಡಿದ 150 ನೇ ಟೆಸ್ಟ್ ಪಂದ್ಯ ಇದಾಗಿದ್ದು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದರು. ಆದರೆ ದ್ವಿತೀಯ ಇನಿಂಗ್ಸ್‌ನಲ್ಲಿ ಸಚಿನ್ ದಾಖಲೆ ಮುರಿದು ತಮ್ಮ 150ನೇ ಪಂದ್ಯವನ್ನು ಸ್ಮರಣೀಯವಾಗಿಸಿದರು.
ಇದನ್ನೂ ಓದಿ Mohammed Shami: ಎನ್‌ಸಿಎ ಅಧಿಕಾರಿಗಳಿಂದ ಶಮಿ ಫಿಟ್‌ನೆಸ್ ಮೇಲೆ ಹದ್ದಿನ ಕಣ್ಣು
4ನೇ ಇನಿಂಗ್ಸ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ 5 ಬ್ಯಾಟರ್
1. ಜೋ ರೂಟ್-1630 ರನ್
2. ಸಚಿನ್ ತೆಂಡೂಲ್ಕರ್-1625 ರನ್
3. ಅಲೆಸ್ಟರ್ ಕುಕ್- 1611 ರನ್
4. ಗ್ರೇಮ್ ಸ್ಮಿತ್-1611 ರನ್
5. ಶಿವನಾರಾಯಣ್ ಚಂದ್ರಪಾಲ್- 1580 ರನ್
ಪಂದ್ಯ ಗೆದ್ದ ಇಂಗ್ಲೆಂಡ್
6 ವಿಕೆಟ್‌ಗೆ 155ರನ್ ಗಳಿಸಿದ್ದಲ್ಲಿಂದ ಭಾನುವಾರ ಬ್ಯಾಟಿಂಗ್ ಮುಂದುವರಿಸಿದ ನ್ಯೂಜಿಲ್ಯಾಂಡ್ 254 ರನ್‌ಗೆ ಆಲೌಟ್ ಆಯಿತು. 103 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 2 ವಿಕೆಟ್‌ಗೆ 104 ರನ್ ಬಾರಿಸಿ ಗೆಲುವು ಸಾಧಿಸಿತು. ಜತೆಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತು. ಎರಡೂ ಇನಿಂಗ್ಸ್‌ನಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ ಬ್ರೈಡನ್ ಕರ್ಸ್ ಒಟ್ಟು 10 ವಿಕೆಟ್ ಕಿತ್ತು ಮಿಂಚಿದರು. ಈ ಸಾಧನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 499 ರನ್ ಬಾರಿಸಿ 151 ರನ್‌ಗಳ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು. ಇತ್ತಂಡಗಳ ನಡುವಣ ದ್ವಿತೀಯ ಪಂದ್ಯ ಡಿ.6ರಿಂದ ಆರಂಭವಾಗಲಿದೆ. ಸರಣಿ ಜೀವಂತವಿರಿಸಬೇಕಿದ್ದರೆ ಆತಿಥೇಯ ಕಿವೀಸ್‌ಗೆ ಈ ಪಂದ್ಯ ಗೆಲ್ಲಲೇ ಬೇಕಾದ ಒತ್ತಡವಿದೆ.