Saturday, 14th December 2024

ಒಂದೇ ಪಂದ್ಯದಿಂದ ದಾಖಲೆಗಳ ಸರದಾರನಾದ ಕೆ.ಎಲ್.ರಾಹುಲ್

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅಮೋಘ ಗೆಲುವು ಸಾಧಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಗುರುವಾರ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆ.ಎಲ್‌ ರಾಹುಲ್‌ 132(69) ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ ಗಳಿಸಿದ ಗರಿಷ್ಠ ಸ್ಕೋರ್. 2020ರ ಮೊದಲ ಶತಕ. ಹಾಗೂ ಈ ಕೂಟದಲ್ಲಿ ಭಾರತೀಯ ಆಟಗಾರನೊಬ್ಬನ ಮೊದಲ ಶತಕವೂ ಆಗಿದೆ.

ಈ ದಾಖಲೆಗೂ ಮೊದಲು ರಾಹುಲ್ ಎರಡು ಬಾರಿ ಜೀವದಾನ ಪಡೆದರು. ರಾಹುಲ್‌ 83 ರನ್‌ ಮತ್ತು 89 ರನ್‌ನಲ್ಲಿ ಇದ್ದಾಗ ವಿರಾಟ್‌ ಕೊಹ್ಲಿ ಎರಡು ಬಾರಿ ಕ್ಯಾಚ್‌ ಕೈಚೆಲ್ಲಿದರು. ಇದು ಆರ್‌ಸಿಬಿಗೆ ದುಬಾರಿಯಾಗಿ ಪರಿಣಮಿಸಿತು. ಅಷ್ಟೇ ಅಲ್ಲ, ಕೆಎಲ್‌ ರಾಹುಲ್‌ ದಾಖಲೆಗಳನ್ನು ಬರೆಯಲು ಅನುವು ಮಾಡಿಕೊಟ್ಟಿತು.

ರಾಹುಲ್‌ ಅವರ 132 ರನ್‌ ಐಪಿಎಲ್‌ನಲ್ಲಿ ತಂಡವೊಂದರ ಕ್ಯಾಪ್ಟನ್‌ವೊಬ್ಬ ಗಳಿಸಿದ ಗರಿಷ್ಠ ಸ್ಕೋರ್‌ ಕೂಡ ಆಗಿದೆ. ರಾಹುಲ್‌ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದು ಸಂಭ್ರಮಿಸಿದ್ದಾರೆ. ಸಚಿನ್‌ ಐಪಿಎಲ್‌ನಲ್ಲಿ ಅತಿವೇಗವಾಗಿ 2,000 ರನ್‌ ಗಳಿಸಿದ ಮೊದಲ ಭಾರತೀಯ ಆಟಗಾರ. ಈ ದಾಖಲೆ ಬರೆಯಲು ಸಚಿನ್‌ಗೆ 63 ಇನ್ನಿಂಗ್ಸ್‌ ಬೇಕಾಯಿತು. ಆದರೆ, ರಾಹುಲ್‌ 60 ಇನ್ನಿಂಗ್ಸ್‌ಗಳಲ್ಲೇ 2000 ರನ್‌ ಮುಟ್ಟಿ ದಾಖಲೆ ಬರೆದಿದ್ದಾರೆ.

ಆರ್‌ಸಿಬಿ ವಿರುದ್ದ 97ರನ್‌ಗಳ ಜಯ ದಾಖಲಿಸಿದೆ. ಇದು ಆರ್‌ಸಿಬಿ ವಿರುದ್ಧ ಪಂಜಾಬ್‌ ತಂಡ ದಾಖಲಿಸಿದ ಎರಡನೇ ಅತಿದೊಡ್ಡ ಗೆಲುವು. 2011ರಲ್ಲಿ ಪಂಜಾಬ್‌ ತಂಡ ಆರ್‌ಸಿಬಿ ವಿರುದ್ಧ 111 ರನ್‌ಗಳ ಜಯ ದಾಖಲಿಸಿತ್ತು.