Friday, 22nd November 2024

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: 37ನೇ ಸ್ಥಾನಕ್ಕೆ ಏರಿದ ಕೆ. ಎಲ್. ರಾಹುಲ್

ದುಬೈ: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ ಕೆ. ಎಲ್. ರಾಹುಲ್ ಅವರು ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ ನಲ್ಲಿ 19 ಸ್ಥಾನ ಜಿಗಿದು 37ನೇ ಸ್ಥಾನಕ್ಕೆ ಏರಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಐದನೇ ಸ್ಥಾನದಲ್ಲಿ ಮುಂದುವರಿ ದಿದ್ದಾರೆ.

56ನೇ ಸ್ಥಾನದೊಂದಿಗೆ ರ್‍ಯಾಂಕಿಂಗ್ ಪಟ್ಟಿಗೆ ಮರುಪ್ರವೇಶಿಸಿದ್ದ ರಾಹುಲ್, ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 129 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 151 ರನ್ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತ್ತು. ಒಂದು ಸ್ಥಾನ ಕಳೆದುಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ, ಐದನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್, ಕ್ರಮವಾಗಿ 6 ಮತ್ತು 7ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಂತರ ಕೊಹ್ಲಿಯನ್ನು ಹಿಂದಿಕ್ಕಿದ್ದರು. ಎರಡನೇ ಟೆಸ್ಟ್ ನಂತರ ಮತ್ತೆರಡು ಸ್ಥಾನಗಳನ್ನು ಹೆಚ್ಚಿಸಿಕೊಂಡು ಎರಡನೇ ಸ್ಥಾನಕ್ಕೆ ಏರಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರಿಗಿಂತ ಕೇವಲ ಎಂಟು ಪಾಯಿಂಟ್ಸ್ ಕಡಿಮೆ ಹೊಂದಿದ್ದಾರೆ.

ಭಾರತದ ರವೀಂದ್ರ ಜಡೇಜಾ, ಟೆಸ್ಟ್ ಆಲ್‌ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, 10ನೇ ಸ್ಥಾನಕ್ಕೆ ಕುಸಿದಿದ್ದರೆ, ಲಾರ್ಡ್ಸ್‌ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ತಲಾ 4 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್, 18 ಸ್ಥಾನಗಳ ಜಿಗಿತ ಕಂಡು 38ನೇ ಸ್ಥಾನಕ್ಕೆ ಏರಿದ್ದಾರೆ. 5 ವಿಕೆಟ್ ಉರುಳಿಸಿದ್ದ ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಮೊದಲ ಸ್ಥಾನದಲ್ಲಿದ್ದಾರೆ.