Wednesday, 4th December 2024

KAR vs BAR: ಶ್ರೇಯಸ್‌ ಗೋಪಾಲ್‌ ಹ್ಯಾಟ್ರಿಕ್‌ ವಿಕೆಟ್‌ ವ್ಯರ್ಥ, ಬರೋಡಾಗೆ ಮಣಿದ ಕರ್ನಾಟಕ!

KAR vs BAR: Karnataka Lost to Baroda by 4 Wickets despite of Shreyas Gopal Hat-trick Wickets

ನವದೆಹಲಿ: ಶ್ರೇಯಸ್‌ ಗೋಪಾಲ್‌ (19ಕ್ಕೆ 4) ಹ್ಯಾಟ್ರಿಕ್‌ ವಿಕೆಟ್‌ ಹೊರತಾಗಿಯೂ ಕರ್ನಾಟಕ ತಂಡ, ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ (KAR vs BAR) ಬರೋಡಾ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್‌ಗಳ ಸೋಲು ಅನುಭವಿಸಿತು. ಆ ಮೂಲಕ ಕರ್ನಾಟಕ ತಂಡ ಟೂರ್ನಿಯ ಬಿ ಗ್ರೂಪ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಇಂದೋರ್‌ನ ಎಮೆರಾಲ್ಡ್‌ ಹೈಸ್ಕೂಲ್‌ ಗ್ರೌಂಡ್‌ನಲ್ಲಿ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಕರ್ನಾಟಕ ತಂಡ ನೀಡಿದ್ದ 170 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಬರೋಡಾ ತಂಡ, ಶಾಶ್ವತ್‌ ರಾವತ್‌ (63 ರನ್) ಅವರ ಅರ್ಧಶತಕದ ಬಲದಿಂದ 18.5 ಓವರ್‌ಗಳಿಗೆ 172 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಈ ಪಂದ್ಯದ ಗೆಲುವಿ ಮೂಲಕ ಒಟ್ಟು 20 ಅಂಕಗಳನ್ನು ಕಲೆ ಹಾಕಿರುವ ಬರೋಡಾ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಗುರಿ ಹಿಂಬಾಲಿಸಿದ ಬರೋಡಾ ತಂಡಕ್ಕೆ ಆರಂಭದಲ್ಲಿಯೇ ವಿದ್ಯಾದರ್‌ ಪಾಟೀಲ್‌ ಆರಂಭಿಕ ಆಘಾತ ನೀಡಿದರು. ತಂಡದ ಮೊತ್ತ 13 ರನ್‌ ಇರುವಾಗಲೇ ಅಭಿಮನ್ಯು ಸಿಂಗ್‌ ರಜಪೂತ್‌ 6 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಶಾಶ್ವತ್‌ ರಾವತ್‌ ಮತ್ತು ಭಾನು ಪಾನಿಯಾ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 89 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಬರೋಡಾ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿತು.

ಶಾಶ್ವತ್‌ ರಾವತ್‌ ಅರ್ಧಶತಕ

ಇನಿಂಗ್ಸ್‌ ಆರಂಭಿಸಿದ ಶಾಶ್ವತ್‌ ರಾವತ್‌ ಅವರು ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್‌ಗೆ ಕೈ ಹಾಕಿದ ಶಾಶ್ವತ್‌, ಕೇವಲ 37 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಏಳು ಬೌಂಡರಿಗಳೊಂದಿಗೆ 63 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಬರೋಡಾ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.ಇನ್ನೇನು ತಂಡವನ್ನು ಗೆಲ್ಲಿಸುವ ಸಮಯದಲ್ಲಿ ಶಾಶ್ವತ್ ರಾವತ್‌ ಅವರನ್ನು ಲೆಗ್‌ ಸ್ಪಿನ್‌ ಶ್ರೇಯಸ್‌ ಗೋಪಾಲ್‌ ಔಟ್‌ ಮಾಡಿದರು.

ಶ್ರೇಯಸ್‌ ಗೋಪಾಲ್‌ ಹ್ಯಾಟ್ರಿಕ್‌ ವಿಕೆಟ್‌ ವ್ಯರ್ಥ

ಉತ್ತಮ ಆರಂಭ ಪಡೆದಿದ್ದರ ಹೊರತಾಗಿಯೂ ಬರೋಡಾಗೆ ಶ್ರೇಯಸ್‌ ಗೋಪಾಲ್‌ ಹ್ಯಾಟ್ರಿಕ್‌ ವಿಕೆಟ್‌ ಆಘಾತ ನೀಡಿದ್ದರು. ಮೊದಲಿಗೆ ಶಾಶ್ವತ್‌ ರಾವತ್‌ ಅವರನ್ನು ಔಟ್‌ ಮಾಡಿದ್ದ ಗೋಪಾಲ್‌, ನಂತರ ಕ್ರಮವಾಗಿ ಹಾರ್ದಿಕ್‌ ಪಾಂಡ್ಯ ಮತ್ತು ಕೃಣಾಲ್‌ ಪಾಂಡ್ಯ ಅವರ ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಕೊನೆಯಲ್ಲಿ ವಿಷ್ಣು ಸೋಲಂಕಿ 21 ಎಸೆತಗಳಲ್ಲಿ 28 ರನ್‌ ಗಳಿಸುವ ಮೂಲಕ ಬರೋಡಾ ತಂಡವನ್ನು ಗೆಲ್ಲಿಸಿದರು. ಶ್ರೇಯಸ್‌ ಗೋಪಾಲ್‌ ಹೊರತುಪಡಿಸಿ ವಿದ್ಯಾದರ್‌ ಪಾಟೀಲ್‌ ಹಾಗೂ ವೈಶಾಖ್‌ ವಿಜಯ್‌ಕುಮಾರ್‌ ತಲಾ ಒಂದೊಂದು ವಿಕೆಟ್‌ ಪಡದಿದ್ದರು.

169 ರನ್‌ಗಳನ್ನು ಕಲೆ ಹಾಕಿದ ಕರ್ನಾಟಕ

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ್ದ ಕರ್ನಾಟಕ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 169 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಬರೋಡಾಗೆ 170 ರನ್‌ಗಳ ಗುರಿಯನ್ನು ನೀಡಿತು. ಕರ್ನಾಟಕ ಪರ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಅಭಿನವ್‌ ಮನೋಹರ್‌ ಅವರು 34 ಎಸೆತಗಳಲ್ಲಿ 56 ರನ್‌ಗಳನ್ನು ಸಿಡಿಸಿದ್ದರು. ಆದರೆ, ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ಮನೀಷ್‌ ಪಾಂಡೆ, ಮಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು.

ಕೆ ಶ್ರೀಜಿತ್‌ 9 ಎಸೆತಗಳಲ್ಲಿ 22 ರನ್‌ ಹಾಗೂ ಸಮರ್ಥ್‌ 38 ರನ್‌ಗಳನ್ನು ಗಳಿಸಿ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಎಡವಿದರು. ಅಂದ ಹಾಗೆ ಕೊನೆಯಲ್ಲಿ ಶ್ರೇಯಸ್‌ ಗೋಪಾಲ್‌ 18 ರನ್‌ಗಳನ್ನು ಕಲೆ ಹಾಕಿದ್ದರು.

ಸ್ಕೋರ್‌ ವಿವರ

ಕರ್ನಾಟಕ: 20 ಓವರ್‌ಗಳಿಗೆ 169-9 (ಅಭಿನವ್‌ ಮನೋಹರ್‌ 56, ಸಮರ್ಥ್‌ ಆರ್‌ 38 ರನ್‌; ಕೃಣಾಲ್‌ ಪಾಂಡ್ಯ 19 ಕ್ಕೆ 2, ಅತಿಥ್‌ ಸೇಥ್‌ 45 ಕ್ಕೆ 2)

ಬರೋಡಾ: 18.5 ಓವರ್‌ಗಳಿಗೆ 172-6 (ಶಾಶ್ವತ್‌ ರಾವತ್‌ 63, ಭಾನು ಪನಿಯಾ 42; ಶ್ರೇಯಸ್‌ ಗೋಪಾಲ್‌ 19ಕ್ಕೆ 4)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಶಾಶ್ವತ್‌ ರಾವತ್‌

ಈ ಸುದ್ದಿಯನ್ನು ಓದಿ: Shreyas Gopal: ಪಾಂಡ್ಯ ಸಹೋದರರನ್ನು ಔಟ್‌ ಮಾಡಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ ಕನ್ನಡಿಗ!