ಬೆಂಗಳೂರು: ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ(Robin Uthappa) ಅವರ ಬಂಧನ ವಾರಂಟ್‌ಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆ ನೀಡಿದೆ. ಭವಿಷ್ಯ ನಿಧಿ ವಂಚನೆ (ಪಿಎಫ್) ಆರೋಪದಡಿ ಅವರ ವಿರುದ್ಧ ವಾರಂಟ್ ಜಾರಿ ಮಾಡಲಾಗಿತ್ತು. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ಪೀಠವು ಉತ್ತಪ್ಪ ಅವರಿಗೆ ಈ ಮಧ್ಯಂತರ ಪರಿಹಾರವನ್ನು ನೀಡಿದೆ ಮತ್ತು ವಾರಂಟ್ ಮತ್ತು ಪಿಎಫ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕ್ರಮಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧ ನೀಡಿರುವ ವಸೂಲಾತಿ ನೋಟಿಸ್ ಮತ್ತು ಬಂಧನ ವಾರಂಟ್ ರದ್ದುಗೊಳಿಸುವಂತೆ ಆಗ್ರಹಿಸಿ ರಾಬಿನ್ ಉತ್ತಪ್ಪ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಾದೇಶಿಕ ಪಿಎಫ್ ಕಮಿಷನರ್ ಮತ್ತು ರಿಕವರಿ ಆಫೀಸರ್ ಅವರ ಆದೇಶದ ಮೇರೆಗೆ ಬೆಂಗಳೂರು ಪೊಲೀಸರು ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿದ್ದರು. ಆ ಮೂಲಕ ಉತ್ತಪ್ಪ ಅವರ ಬಂಧನ ಖಚಿತ ಎಂದು ಪರಿಗಣಿಸಲಾಗಿತ್ತು. ಆದರೆ, ಕ್ರಿಕೆಟಿಗನಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
IPL 2025: ʻಕೊಹ್ಲಿ-ಸಾಲ್ಟ್ ಓಪನರ್ಸ್ʼ-ತನ್ನ ನೆಚ್ಚಿನ ಆರ್‌ಸಿಬಿ ಪ್ಲೇಯಿಂಗ್ XI ಆರಿಸಿದ ರಾಬಿನ್ ಉತ್ತಪ್ಪ!
ರಾಬಿನ್ ಉತ್ತಪ್ಪ ಅವರು ಪಿಎಫ್‌ನಲ್ಲಿ ವಂಚನೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ವಿವಾದವು ಖಾಸಗಿ ಸಂಸ್ಥೆ ಸೆಂಚೂರಿಸ್ ಲೈಫ್‌ಸ್ಟೈಲ್ ಬ್ರಾಂಡ್‌ಗೆ ಸಂಬಂಧಿಸಿದೆ. ಉತ್ತಪ್ಪ ಅವರು 2018 ರಿಂದ 2020 ರವರೆಗೆ ಅದರ ನಿರ್ದೇಶಕರಾಗಿದ್ದರು. ಪಿಎಫ್ ಅಧಿಕಾರಿಗಳು ನೀಡಿದ ನೋಟಿಸ್ ಪ್ರಕಾರ, ಉದ್ಯೋಗಿಗಳ ಪಿಎಫ್ ಕೊಡುಗೆಯನ್ನು ಕಂಪನಿಯು ಕಡಿತಗೊಳಿಸುತ್ತಿದೆ, ಆದರೆ ಈ ಮೊತ್ತವನ್ನು ಅವರ ಖಾತೆಗಳಿಗೆ ಜಮಾ ಮಾಡಿಲ್ಲ. ಈ ಮೊತ್ತವು ಅಂದಾಜು 23.16 ಲಕ್ಷ ರೂ. ಎಂದು ಹೇಳಲಾಗಿದೆ.
ರಾಬಿನ್ ಉತ್ತಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ, ಉತ್ತಪ್ಪ ಅವರು 2020ರಲ್ಲಿ ಸಂಸ್ಥೆಯ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಲ್ಲದೇ ತಮ್ಮ ಅಧಿಕಾರಾವಧಿಯಲ್ಲೂ ಕಂಪನಿಯ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ. ಇದಕ್ಕಾಗಿ ಕಂಪನಿಯ ಸಂಸ್ಥಾಪಕ ಕೃಷ್ಣದಾಸ್ ಅವರೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿದ್ದರು.
— Robbie Uthappa (@robbieuthappa) December 21, 2024
ರಾಬಿನ್ ಉತ್ತಪ್ಪ ಹೇಳಿದ್ದೇನು?
ರಾಬಿನ್ ಉತ್ತಪ್ಪ ಈ ಬಗ್ಗೆ ಡಿಸೆಂಬರ್ 21 ರಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸ್ಪಷ್ಟನೆ ನೀಡಿದ್ದರು.
“2018 -19ರಲ್ಲಿ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಚೂರಿಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಬೆರ್ರೀಸ್ ಫ್ಯಾಶನ್ ಹೌಸ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದ್ದೆ. ಈ ಕಾರಣಕ್ಕೆ ಆ ಕಂಪನಿಗಳು ನನ್ನನ್ನು ನಿರ್ದೇಶಕನನ್ನಾಗಿ ನೇಮಿಸಿದ್ದವು. ಇದರ ಹೊರತಾಗಿಯೂ ನಾನು ಆ ಕಂಪನಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿರಲಿಲ್ಲ ಮತ್ತು ಆ ಕಂಪನಿಗಳ ದೈನಂದಿನ ಹಣಕಾಸು ವ್ಯವಹಾರಗಳಲ್ಲಿ ಭಾಗಿಯಾಗಿರಲಿಲ್ಲ. ವೃತ್ತಿಪರ ಕ್ರಿಕೆಟಿಗನಾಗಿ, ನಿರೂಪಕನಾಗಿ, ವೀಕ್ಷಕ ವಿವರಣೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಆದ್ದರಿಂದ ಈ ಕಂಪನಿಗಳ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಸಮಯಾವಕಾಶ ಇರಲಿಲ್ಲ ಹಾಗೂ ಅಷ್ಟೊಂದು ಪರಿಣಿತಿ ನನಗಿಲ್ಲ. ನಾನು ಹಣ ಹೂಡಿಕೆ ಮಾಡಿದ ಕಂಪನಿಗಳಲ್ಲಿಯೂ ನಾನು ಹೆಚ್ಚಾಗಿ ಸಕ್ರಿಯರಾಗಿರುವುದಿಲ್ಲ,” ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದರು.
ಈ ಸುದ್ದಿಯನ್ನು ಓದಿ: Robin Uthappa: ವಂಚನೆ ಆರೋಪ; ರಾಬಿನ್ ಉತ್ತಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿ