ನವದೆಹಲಿ: ಕಳೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿನಲ್ಲಿ ಅಲ್‌ಸೋಲ್ಡ್ ಆಗಿದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಅವರು ಪ್ರಸ್ತುತ ನಡೆಯುತ್ತಿರುವ 2025ರ ವಿಜಯ್ ಹಝಾರೆ ಟ್ರೋಫಿ (vijay Hazare Trophy) ಟೂರ್ನಿಯಲ್ಲಿ ಹ್ಯಾಟ್ರಿಕ್ ಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ಮೆಗಾ ಹರಾಜಿನಲ್ಲಿ ತನ್ನನ್ನು ನಿರ್ಲಕ್ಷ್ಯೆ ತೋರಿದ್ದ ಐಪಿಎಲ್ ಫ್ರಾಂಚೈಸಿಗಳಿಗೆ ತಿರುಗೇಟು ನೀಡಿದ್ದಾರೆ.
ಮಯಾಂಕ್ ಅಗರ್ವಾಲ್ ಭಾರತ ತಂಡದಲ್ಲಿ ಮಿಂಚಿದ್ದ ಕಾಲವೊಂದಿತ್ತು. ಆದರೆ, ಸ್ಥಿರ ಪ್ರದರ್ಶನದ ನಂತರ ಅವರನ್ನು ಟೀಮ್ ಇಂಡಿಯಾದಿಂದ ಕೈ ಬಿಡಲಾಗಿತ್ತು. 2022ರಲ್ಲಿ ಶ್ರೀಲಂಕಾ ವಿರುದ್ಧ ಬೆಂಗಳೂರು ಟೆಸ್ಟ್‌ನಲ್ಲಿ ಆಡಿದ ನಂತರ ಮಯಾಂಕ್ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇದರ ನಡುವೆ 2025ರ ಐಪಿಎಲ್ ಮೆಗಾ ಹರಾಜಿನಲ್ಲಿಯೂ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ
ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಭಾರಿ ನಿರಾಶೆಯಾಗಿತ್ತು. ಆದರೆ, ಇದೀಗ ನಡೆಯುತ್ತಿರುವ ವಿಜಯ್ ಹಝಾರೆ ಟ್ರಫಫಿ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದಾರೆ. ಈ ಟೂರ್ನಿಯಲ್ಲಿ ಸತತ 3 ಪಂದ್ಯಗಳಲ್ಲಿ 3 ಶತಕ ಸಿಡಿಸಿದ್ದಾರೆ.
Ayush Mhatre: 181 ರನ್ ಸಿಡಿಸಿ ಯಶಸ್ವಿ ಜೈಸ್ವಾಲ್‌ರ ವಿಶ್ವ ದಾಖಲೆ ಮುರಿದ ಆಯುಷ್ ಮ್ಹಾತ್ರೆ!
ಹ್ಯಾಟ್ರಿಕ್ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್
ಮಂಗಳವಾರ ಅಹಮದಾಬಾದ್‌ನ ರೈಲ್ವೇಸ್ ಕ್ರಿಕೆಟ್ ಮೈದಾನದಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ತಮ್ಮ ಮನಮೋಹಕ ಬ್ಯಾಟಿಂಗ್‌ನಿಂದ 124 ರನ್‌ಗಳನ್ನು ಗಳಿಸಿದ್ದಾರೆ. ಅವರು ತಮ್ಮ ಇನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 124 ರನ್ ಗಳಿಸಿದರು. ಅವರ ನಾಯಕತ್ವದ ಇನಿಂಗ್ಸ್‌ನ ಬಲದಿಂದ ಕರ್ನಾಟಕ 8 ವಿಕೆಟ್ ನಷ್ಟಕ್ಕೆ 320 ರನ್‌ಗಳನ್ನು ಕಲೆ ಹಾಕಿತು. ವಿಜಯ್ ಹಜಾರೆ ಟ್ರೋಫಿಯಲ್ಲಿ ಇದು ಅವರ ಸತತ ಮೂರನೇ ಶತಕವಾಗಿದೆ.
ಇದಕ್ಕೂ ಮುನ್ನ ಮಯಾಂಕ್ ಅಗರ್ವಾಲ್ ಅವರು ಪಂಜಾಬ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಅಜೇಯ 139 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಅವರು 127 ಎಸೆತಗಳನ್ನು ಎದುರಿಸಿ 17 ಮನಮೋಹಕ ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದಾದ ಬಳಿಕ ಅರುಣಾಚಲ ಪ್ರದೇಶದ ವಿರುದ್ಧ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಮೂಲಕ 100 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಮಯಾಂಕ್ ಶತಕದ ಬಲದಿಂದ ಕರ್ನಾಟಕ ತಂಡ, ಅರುಣಾಚಲ ಪ್ರದೇಶ ವಿರುದ್ಧ 10 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಈ ಇನಿಂಗ್ಸ್‌ನ ಆಧಾರದಲ್ಲಿ ಅವರು ಆಯ್ಕೆಗಾರರಿಗೆ ಸಂದೇಶವನ್ನೂ ರವಾನಿಸಿದ್ದಾರೆ.
ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಮಯಾಂಕ್ ಕಣ್ಣು
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಅವರು ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ. 50 ಓವರ್‌ಗಳಲ್ಲಿನ ತಮ್ಮ ಅತ್ಯುತ್ತಮ ಫಾರ್ಮ್‌ನೊಂದಿಗೆ ಅವರು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಅದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಭಾರತ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ವಿರುದ್ದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಫಾರ್ಮ್ ಕಳೆದುಕೊಂಡಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಂಗೆಂಡ್ ಏಕದಿನ ಸರಣಿಯನ್ನು ಆಡಲಿದ್ದಾರೆಯೆ? ಅಥವಾ ಅವರ ಬದಲು ಇನ್‌ಫಾರ್ಮ್ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಲಾಗುವುದೇ ಎಂಬುದು ಇನೂ ಖಚಿತತೆ ಇಲ್ಲ.
ಈ ಸುದ್ದಿಯನ್ನು ಓದಿ: Vijay Hazare Trophy: ವಿಜಯ್ ಹಜಾರೆಯಲ್ಲಿ ಅಜೇಯ ಓಟ ಮುಂದುವರಿಸಿದ ಕರ್ನಾಟಕ