ವಡೋದರಾ: ದೇಶಿ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನ ಮುಂದುವರಿಸಿರುವ ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ (Devdutt Padikkal), ಶನಿವಾರ (ಜನವರಿ 11) ಬರೋಡಾ ವಿರುದ್ಧ ವಿಜಯ್ ಹಝಾರೆ ಟ್ರೋಫಿಯ ಫ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಕರ್ಷಕ ಶತಕ (102 ರನ್) ಸಿಡಿಸಿದ್ದಾರೆ. ಆ ಮೂಲಕ ಕರ್ನಾಟಕ ತಂಡದ ಮೊತ್ತವನ್ನು ನಿಗದಿತ 50 ಓವರ್‌ಗಳಲ್ಲಿ 281 ರನ್ ತಲುಪಲು ನೆರವು ನೀಡಿದ್ದರು.
ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಬರೋಡಾ ನಾಯಕ ಕೃಣಾಲ್ ಪಾಂಡ್ಯ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಉತ್ತಮ ಫಾರ್ಮ್‌ನಲ್ಲಿದ್ದ ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್ ಕೇವಲ 6 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
ದೇವದತ್-ಅನಿಸ್ ಶತಕದ ಜೊತೆಯಾಟ
ಎರಡನೇ ವಿಕೆಟ್‌ಗೆ ಜೊತೆಗೂಡಿದ ದೇವದತ್ ಪಡಿಕ್ಕಲ್ ಹಾಗೂ ಕೆವಿ ಅನಿಸ್ ಅವರು ಬರೋಡಾದ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಮೆರೆದು ಶತಕ (133 ರನ್)ದ ಜೊತೆಯಾಟದಿಂದ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ 96 ಎಸೆತಗಳಲ್ಲಿ 15 ಮನಮೋಹಕ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ನೆರವಿನಿಂದ 102 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಕೆವಿ ಅನಿಸ್ 64 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 54 ರನ್ ಬಾರಿಸಿ ತಂಡದ ಮೊತ್ತ 281 ರನ್ ಗಳಿಗೆ ತಲುಪಿಸಿದರು.
Devdutt Padikkal all boundaries today pic.twitter.com/kwv51cBNEE
— RCB Zone (@TheRcbZone) January 11, 2025
ಲೀಸ್ಟ್ -ಎ ನಲ್ಲಿ 9ನೇ ಶತಕ
ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿರುವ ದೇವದತ್ ಪಡಿಕ್ಕಲ್ ಈ ಶತಕದ ಮೂಲಕ ಲೀಸ್ಟ್ ʻಎʼ ನಲ್ಲಿ ತಮ್ಮ 9ನೇ ಸೆಂಚುರಿ ಪೂರೈಸಿದರು. ಅಲ್ಲದೆ 30 ಇನಿಂಗ್ಸ್‌ಗಳಿಂದ 82.37ರ ಸರಾಸರಿಯಲ್ಲಿ 12 ಅರ್ಧಶತಕ ಸೇರಿದಂತೆ 1977 ರನ್ ಬಾರಿಸಿದ್ದಾರೆ.
ಬರೋಡಾ ವಿರುದ್ಧ ಬ್ಯಾಕ್ ಟು ಬ್ಯಾಕ್ ಶತಕ
ವಿಜಯ್ ಹಜಾರೆ ಟ್ರೋಫಿಯಲ್ಲಿ ದೇವದತ್ ಪಡಿಕ್ಕಲ್ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. 2024ರ ಡಿಸೆಂಬರ್‌ನಲ್ಲಿ ಚಂಡೀಗಢದಲ್ಲಿ ನಡೆದಿದ್ದ ಪಂದ್ಯದಲ್ಲೂ ಶತಕ ಸಿಡಿಸಿದ್ದ ಪಡಿಕ್ಕಲ್, ಇದೀಗ 102 ರನ್ ದಾಖಲಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಉತ್ತಮ ದಾಖಲೆ ಹೊಂದಿರುವ ಪಡಿಕ್ಕಲ್, 26 ಇನಿಂಗ್ಸ್‌ಗಳಿಂದ 94.47 ಸ್ಟ್ರೆಕ್ ರೇಟ್‌ನಲ್ಲಿ 1915 ರನ್ ಕಲೆ ಹಾಕಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ ಬಾರಿಸುವ ಮೂಲಕ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉತ್ತಮ ಇಂಪ್ಯಾಕ್ಟ್ ಪ್ಲೇಯರ್ ಆಗುವ ಸೂಚನೆಯನ್ನು ದೇವದತ್ ಪಡಿಕ್ಕಲ್ ನೀಡಿದ್ದಾರೆ.
ಈ ಸುದ್ದಿಯನ್ನು ಓದಿ: IPL 2025 Mega Auction: ಆರ್‌ಸಿಬಿಗೆ ಮರಳಿದ ಕನ್ನಡಿಗ ದೇವದತ್ ಪಡಿಕ್ಕಲ್!