ನವದೆಹಲಿ: ಜನವರಿ 13ರಿಂದ 19ರ ತನಕ ಹೊಸದಿಲ್ಲಿಯಲ್ಲಿ ನಡೆಯಲಿರುವ ಚೊಚ್ಚಲ ಖೋ ಖೋ ವಿಶ್ವಕಪ್(Kho Kho World Cup) ಪಂದ್ಯಾವಳಿಯಲ್ಲಿ ಆತಿಥೇಯ ಭಾರತ ಪುರುಷರ ತಂಡವು ನೇಪಾಳ(India Vs Nepal) ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಭಾರತದ ಮಹಿಳಾ ತಂಡ ಜ.14ರಂದು ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದೊಂದಿಗೆ ಅಭಿಯಾನ ಶುರು ಮಾಡಲಿದೆ. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಒಟ್ಟು 39 ತಂಡಗಳು ಪಾಲ್ಗೊಳ್ಳಲಿವೆ.
ಪುರುಷರ ಸ್ಪರ್ಧೆಯಲ್ಲಿ 5 ತಂಡಗಳಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಸೇರಿದಂತೆ ನೇಪಾಳ, ಪೆರು, ಬ್ರೆಜಿಲ್ ಮತ್ತು ಭೂತಾನ್ ತಂಡಗಳು ಎ ಗುಂಪಿನಲ್ಲಿವೆ. ಮಹಿಳೆಯರ ವಿಭಾಗದಲ್ಲಿ 19 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತವನ್ನು ಒಳಗೊಂಡ ಎ ಗುಂಪಿನಲ್ಲಿ ನಾಲ್ಕು ತಂಡಗಳಿದ್ದು, ಉಳಿದ ಗುಂಪುಗಳಲ್ಲಿ ಐದು ತಂಡಗಳಿವೆ.
ಜ.16ಕ್ಕೆ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದೆ. 17ರಿಂದ ಪ್ಲೇಆಫ್ ಹಂತದ ಸ್ಪರ್ಧೆಗಳು ಆರಂಭವಾಗಲಿದೆ. 19ರಂದು ಪ್ರಶಸ್ತಿ ಸುತ್ತಿನ ಸ್ಪರ್ಧೆ ನಡೆಯಲಿದೆ. ಉದ್ಘಾಟನ ಪಂದ್ಯವನ್ನು ಭಾರತ ಮತ್ತು ಪಾಕ್ ಮಧ್ಯೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಪಾಕಿಸ್ತಾನ ತಂಡಗಳಿಗೆ ವೀಸಾ ನೀಡದ ಕಾರಣ ಪಾಕ್‌ಗೆ ಆಡುವ ಅವಕಾಶ ಕೈತಪ್ಪಿತು.
ಪುರುಷರ ಗುಂಪು
ಗುಂಪು ‘ಎ’: ಭಾರತ, ನೇಪಾಳ, ಪೆರು, ಬ್ರೆಜಿಲ್, ಭೂತಾನ್
ಗುಂಪು ‘ಬಿ’: ದಕ್ಷಿಣ ಆಫ್ರಿಕಾ, ಘಾನಾ, ಅರ್ಜೆಂಟೀನಾ, ನೆದರ್ಲೆಂಡ್ಸ್, ಇರಾನ್
ಗುಂಪು ‘ಸಿ’: ಬಾಂಗ್ಲಾದೇಶ, ಶ್ರೀಲಂಕಾ, ದಕ್ಷಿಣ ಕೊರಿಯಾ, ಅಮೆರಿಕ, ಪೋಲೆಂಡ್
ಗುಂಪು ‘ಡಿ’ ಇಂಗ್ಲೆಂಡ್, ಜರ್ಮನಿ, ಮಲೇಷ್ಯಾ, ಆಸ್ಟ್ರೇಲಿಯಾ, ಕಿನ್ಯಾ.
ಮಹಿಳೆಯರ ಗುಂಪು
ಗುಂಪು ‘ಎ’: ಭಾರತ, ಇರಾನ್, ಮಲೇಷ್ಯಾ, ದಕ್ಷಿಣ ಕೊರಿಯಾ
ಗುಂಪು ‘ಬಿ’: ಇಂಗ್ಲೆಂಡ್, ಆಸ್ಟ್ರೇಲಿಯಾ, ಕಿನ್ಯಾ, ಉಗಾಂಡಾ, ನೆದರ್ಲೆಂಡ್ಸ್
ಗುಂಪು ‘ಸಿ’: ನೇಪಾಳ, ಭೂತಾನ್, ಶ್ರೀಲಂಕಾ, ಜರ್ಮನಿ, ಬಾಂಗ್ಲಾದೇಶ
ಗುಂಪು ‘ಡಿ’: ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪೋಲೆಂಡ್, ಪೆರು, ಇಂಡೊನೇಷ್ಯಾ