Sunday, 15th December 2024

ಸ್ಪಿನ್ನರ್‌ ಚಕ್ರವರ್ತಿಯ ಗೂಗ್ಲಿ ಬಲೆಗೆ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್

ಅಬುಧಾಬಿ: ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ (20ಕ್ಕೆ 5) ಗೂಗ್ಲಿ ಬಲೆಗೆ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ವಿರುದ್ಧ 59 ರನ್‌ಗಳಿಂದ ಶರಣಾಗಿದೆ. ಈ ಮೂಲಕ ಡೆಲ್ಲಿ ತಂಡ ಅಂಕಪಟ್ಟಿ ಯಲ್ಲಿ ಅಗ್ರಸ್ಥಾನಕ್ಕೆ ಮರಳುವಲ್ಲಿ ಎಡವಿದರೆ, ಕೆಕೆಆರ್ ತಂಡ ಪ್ಲೇಆಫ್​ ಅವಕಾಶವನ್ನು ಜೀವಂತವಿರಿಸಿಕೊಂಡಿತು.

ಶೇಕ್ ಜಯೆದ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ ತಂಡ 6 ವಿಕೆಟ್‌ಗೆ 194 ರನ್ ಪೇರಿಸಿತು. ಪ್ರತಿಯಾಗಿ ಡೆಲ್ಲಿ ತಂಡ ವರುಣ್ ಸ್ಪಿನ್ ದಾಳಿ ಎದುರು ತತ್ತರಿಸಿ 9 ವಿಕೆಟ್‌ಗೆ 135 ರನ್ ಗಳಿಸಲಷ್ಟೇ ಶಕ್ತವಾಯಿತು.

ಅನುಭವಿ ಆರಂಭಿಕ ಅಜಿಂಕ್ಯ ರಹಾನೆ ಶೂನ್ಯಕ್ಕೆ ಮೊದಲ ಓವರ್‌ನಲ್ಲೇ ಔಟಾದರೆ, ಕಳೆದೆರಡು ಪಂದ್ಯಗಳ ಶತಕವೀರ ಶಿಖರ್ ಧವನ್ (6) ಕೂಡ ಈ ಬಾರಿ ಬೇಗನೆ ನಿರ್ಗಮಿಸಿದರು. ಪ್ಯಾಟ್ ಕಮ್ಮಿನ್ಸ್ ಡೆಲ್ಲಿ ತಂಡದ ಚೇಸಿಂಗ್‌ಗೆ ದೊಡ್ಡ ಹೊಡೆತ ನೀಡಿದರು. ಬಳಿಕ ನಾಯಕ ಶ್ರೇಯಸ್ ಅಯ್ಯರ್ (47) ಮತ್ತು ರಿಷಭ್ ಪಂತ್ (27) 3ನೇ ವಿಕೆಟ್‌ಗೆ 63 ರನ್ ಪೇರಿಸಿ ತಂಡವನ್ನು ಗೆಲುವಿನ ಹಾದಿಗೆ ತರಲು ಯತ್ನಿಸಿದರು. ಆದರೆ ವರುಣ್ ಚಕ್ರವರ್ತಿ ಈ ಜೋಡಿಯನ್ನು ಬೇಧಿಸಿ ಡೆಲ್ಲಿ ತಂಡವನ್ನು ಚೆಲ್ಲಾಪಿಲ್ಲಿ ಮಾಡಿ ದರು. ಪಂತ್, ಹೆಟ್ಮೆಯರ್ (10), ಶ್ರೇಯಸ್, ಸ್ಟೋಯಿನಿಸ್ (6) ಮತ್ತು ಅಕ್ಷರ್ ಪಟೇಲ್ (9) ವಿಕೆಟ್‌ಗಳನ್ನು ಕಬಳಿಸಿ ವರುಣ್ ಡೆಲ್ಲಿ ತಂಡಕ್ಕೆ ಸೋಲು ಖಚಿತಪಡಿಸಿದರು.

ಆರ್‌ಸಿಬಿ ವಿರುದ್ಧದ ದಯನೀಯ ಬ್ಯಾಟಿಂಗ್ ವೈಫಲ್ಯದ ಬಳಿಕ ಈ ಪಂದ್ಯದಲ್ಲೂ ಕೆಕೆಆರ್ ತಂಡದ ಆರಂಭ ಆಘಾತಕಾರಿ ಯಾಗಿತ್ತು. ಶುಭಮಾನ್ ಗಿಲ್ (9), ರಾಹುಲ್ ತ್ರಿಪಾಠಿ (13) ಮತ್ತು ದಿನೇಶ್ ಕಾರ್ತಿಕ್ (3) ತಂಡದ ಮೊತ್ತ 42 ರನ್ ಆಗುವಷ್ಟರಲ್ಲೇ ಡಗೌಟ್ ಸೇರಿದ್ದರು.

ಆಗ ಜತೆಗೂಡಿದ ನಿತೀಶ್ ರಾಣಾ (81 ರನ್) ಮತ್ತು ಸುನೀಲ್ ನಾರಾಯಣ್ (64ರನ್) 4ನೇ ವಿಕೆಟ್‌ಗೆ 115 ರನ್ ಸೇರಿಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಕೊನೆಯಲ್ಲಿ ನಾಯಕ ಇವೊಯಿನ್ ಮಾರ್ಗನ್ (17) ತಂಡವನ್ನು 200ರ ಸನಿಹ ತಂದು ನಿಲ್ಲಿಸಿದರು.