Thursday, 12th December 2024

ಪಂದ್ಯ ಕೈಚೆಲ್ಲಿದ ಪಂಜಾಬ್, ದಿನೇಶ್ ಪಂದ್ಯಶ್ರೇಷ್ಠ

ಅಬುಧಾಬಿ: ಕೊನೆ ಕ್ಷಣ ತಪ್ಪು ನಿರ್ಧಾರಕ್ಕೆ ಪಂಜಾಬ್ ತನ್ನನ್ನೇ ಶಪಿಸಿಕೊಳ್ಳುವಂತಾಯಿತು.

ಗೆಲ್ಲಲೇ ಬೇಕಾಗಿದ್ದ ಪಂದ್ಯದಲ್ಲಿ ಅತೀ ಬುದ್ದಿವಂತಿಕೆ ತೋರಿದ ಪಂಜಾಬ್ ತಂಡವು, ಹೊಡೆಬಡಿಯ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಆಟವನ್ನು ಸದುಪಯೋಗಪಡಿಸಿಕೊಳ್ಳದೆ ಕೇವಲ ಎರಡು ರನ್ನುಗಳಿಂದ ಪಂದ್ಯ ಸೋತು, ಕೋಲ್ಕತಾಗೆ ಗೆಲುವು ಬಿಟ್ಟುಕೊಟ್ಟಿತು.

ಈ ಮೂಲಕ ಕೆಕೆಆರ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೇವಲ 2 ರನ್ ಗಳಿಂದ ರೋಚಕ ಜಯ ಸಾಧಿಸಿತು.

ಐಪಿಎಲ್ ನ 24ನೇ ಪಂದ್ಯದಲ್ಲಿ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿ ಕೊಂಡರು. ಕೆಕೆಆರ್ ತಂಡದಲ್ಲಿ ಆರಂಭಿಕ ಆಟಗಾರರಾದ ರಾಹುಲ್ ತ್ರಿಪಾಠಿ ಕೇವಲ 4ರನ್ ಗಳಿಸಿ ಮಹಮ್ಮದ್ ಶಮಿ ಬೌಲಿಂಗ್ನಲ್ಲಿ ಔಟಾದರು.

ನಂತರ ಬಂದ ನಿತೀಶ್ ರಾಣಾ ಕೂಡ 2ರನ್ ಗಳಿಸಿ ರನ್ ಔಟಾದರು. ಇಯಾನ್ ಮಾರ್ಗನ್ 24 ರನ್ ಗಳಿಸಿ, ಔಟಾಗಿದ್ದು, ಆರಂಭಿಕ ಆಟಗಾರ ಶುಭಮನ್ ಗಿಲ್ 47 ಎಸೆತಗಳಲ್ಲಿ (57)ರನ್ ಗಳಿಸಿ ರನ್ ಔಟ್ ಆದರು. ನಂತರ ಆಂಡ್ರೆ ರಸ್ಸೆಲ್ ಕೇವಲ 5ರನ್ ಗಳಿಸಿ ಔಟಾಗಿದ್ದು, ಬಳಿಕ ನಾಯಕ ದಿನೇಶ್ ಕಾರ್ತಿಕ್ 29 ಎಸೆತಗಳಲ್ಲಿ (58)ರನ್ ಗಳಿಸುವ ಮೂಲಕ ಕೊನೆಯ ಓವರ್ ನಲ್ಲಿ ಔಟಾದರು. ಒಟ್ಟಾರೆ ಕೆಕೆಆರ್ ತಂಡ 6 ವಿಕೆಟ್ ನಷ್ಟಕ್ಕೆ 164ರನ್ ಗಳ ಮೊತ್ತ ದಾಖಲಿಸಿತು.

ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರಂಭಿಕ ಆಟಗಾರರಾದ ನಾಯಕ ಕೆ..ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಜೊತೆಯಾಟವಾಡಿದರು. ಮಯಾಂಕ್ ಅಗರ್ವಾಲ್ 39 ಎಸೆತಗಳಲ್ಲಿ (56)ರನ್ ಗಳಿಸಿದ್ದು, ಪ್ರಸಿದ್ಧ್ ಕೃಷ್ಣ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.

ನಂತರ ಬಂದ ನಿಕೋಲಸ್ ಪೂರನ್ 16 ರನ್ ಗಳಿಸಿ ಔಟಾದರು. ಬಳಿಕ ಬಂದ ಸಿಮ್ರಾನ್ ಸಿಂಗ್ ಕೂಡ 4ರನ್ ಗಳಿಸಿ ಔಟಾದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದ ಆರಂಭಿಕ ಆಟಗಾರ ನಾಯಕ ಕೆಎಲ್ ರಾಹುಲ್ 58 ಎಸೆತಗಳಲ್ಲಿ (74)ರನ್ ಗಳಿಸಿದ್ದು, ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಔಟಾದರು.

ಗೆಲುವಿನ ಅಂಚಿನಲ್ಲಿ ಕಡಿಮೆ ಎಸೆತದಲ್ಲಿ ಹೆಚ್ಚು ರನ್ ಗಳಿಸುವ ಅವಕಾಶ ಇದ್ದಾಗ, ಮ್ಯಾಕ್ಸ್’ವೆಲ್ ರನ್ನು ಬ್ಯಾಟಿಂಗಿಗೆ ಇಳಿಸದೆ, ಕೀಪರ್‌ ಸಿಮ್ರ‍ನ್‌ ಸಿಂಗ್ ರನ್ನು ಮೊದಲೇ ಕಳಿಸಿದ್ದು, ತಪ್ಪು ನಿರ್ಧಾರವಾಗಿತ್ತು. ಕೊನೆಹಂತದಲ್ಲಿ ಮ್ಯಾಕ್ಸ್ವೆಲ್ ಬೆನ್ನುಬೆನ್ನಿಗೆ ಬೌಂಡರಿ ಬಾರಿಸಿದರೂ, ಎಸೆತಗಳ ಕೊರತೆ ಕಾಡಿತ್ತು. ಈ ಮೂಲಕ ಪಂಜಾಬ್ ತಂಡದ ಬಹುತೇಕ ಪ್ಲೇಆಫ್ ಆಸೆ ಕಮರಿದಂತಾಗಿದೆ.