ಅಬುಧಾಬಿ: ನಾಯಕತ್ವ ಬದಲಾವಣೆಯೊಂದಿಗೆ ಅದೃಷ್ಟ ಖುಲಾಯಿಸಲಿಲ್ಲ. ಕೋಲ್ಕತ ನೈಟ್‌ರೈಡರ್ಸ್ ತಂಡ ಹಾಲಿ ಚಾಂಪಿ ಯನ್ ಮುಂಬೈ ಇಂಡಿಯನ್ಸ್ ತಂಡದ ಸರ್ವಾಂಗೀಣ ನಿರ್ವಹಣೆ ಎದುರು 8 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿದೆ.
ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ (78*ರನ್) ಸಾಹಸದಿಂದ ಐಪಿಎಲ್-13ರಲ್ಲಿ ಆರನೇ ಗೆಲುವು ದಾಖಲಿಸಿದ ರೋಹಿತ್ ಶರ್ಮ ಬಳಗ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ.
ಶೇಕ್ ಜಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ ತಂಡ ನಿಧಾನ ಗತಿಯ ಪಿಚ್‌ನಲ್ಲಿ ರನ್‌ಗಾಗಿ ಪರದಾಡಿತು. ಬಾಲಂಗೋಚಿ ಪ್ಯಾಟ್ ಕಮ್ಮಿನ್ಸ್ (53*ರನ್, 36 ಎಸೆತ, 5 ಬೌಂಡರಿ, 2 ಸಿಕ್ಸರ್) ಸಿಡಿಸಿದ ಬಿರುಸಿನ ಅರ್ಧಶತಕದ ನೆರವಿನಿಂದ ಕೆಕೆಆರ್, 5 ವಿಕೆಟ್‌ಗೆ 148 ರನ್ ಸೇರಿಸಿತು. ಪ್ರತಿಯಾಗಿ ಗುರಿಯತ್ತ ಮುನ್ನುಗ್ಗಿದ
ಮುಂಬೈ ತಂಡ 16.5 ಓವರ್‌ಗಳಲ್ಲಿ 2 ವಿಕೆಟ್‌ಗೆ 149 ರನ್ ಗಳಿಸಿ ಗೆಲುವು ಒಲಿಸಿಕೊಂಡಿತು. ಇವೊಯಿನ್ ಮಾರ್ಗನ್ ಸಾರಥ್ಯದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಕೆಕೆಆರ್ ನಿರಾಸೆ ಎದುರಿಸಿತು.
ಡಿಕಾಕ್ ಒಂದೆಡೆ ಬಿರುಸಿನ ಆಟದ ಮೂಲಕ ಕೆಕೆಆರ್ ಬೌಲರ್‌ಗಳನ್ನು ಕಾಡಿದರೆ, ರೋಹಿತ್ ಶರ್ಮ (35 ರನ್, 36 ಎಸೆತ, 5 ಬೌಂಡರಿ, 1 ಸಿಕ್ಸರ್) ಸಮರ್ಥ ಬೆಂಬಲ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 63 ಎಸೆತಗಳಲ್ಲಿ 94 ರನ್ ಪೇರಿಸಿತು. ಡಿಕಾಕ್ 25 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ರೋಹಿತ್ ಬೆನ್ನಲ್ಲೇ ಸೂರ್ಯಕುಮಾರ್ (10) ಔಟಾದರೂ, ಡಿಕಾಕ್ ಒಂದೆಡೆ ಭದ್ರವಾಗಿ ನೆಲೆಯೂರಿ ಹಾರ್ದಿಕ್ ಪಾಂಡ್ಯ (21) ಜತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಅಂತಿಮವಾಗಿ, ವಿಕೆಟ್ ಕೀಪರ್ ಕ್ವಿಂಟನ್ ಡಿ’ಕಾಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.