Thursday, 12th December 2024

ಆತ್ಮವಿಶ್ವಾಸದಲ್ಲಿರುವ ಆರ್‌ಸಿಬಿಗೆ ಇಂದು ಕೆಕೆಆರ್‌ ಸವಾಲು

ಶಾರ್ಜಾ: ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ವಿರುದ್ಧದ ಪಂದ್ಯವನ್ನು ಅದೃಷ್ಟದ ಬಲದಿಂದ ಕೊನೆಯ ಹಂತದಲ್ಲಿ ರೋಚಕ ವಾಗಿ ಗೆದ್ದಿರುವ ದಿನೇಶ್‌ ಕಾರ್ತಿಕ್‌ ನೇತೃತ್ವದ ಕೆಕೆಆರ್‌ ಸೋಮವಾರದ ಮುಖಾಮುಖಿಯಾಗ ಲಿದೆ.

ಆರ್‌ಸಿಬಿ ಇದುವರೆಗೆ ಆಡಿದ ಪಂದ್ಯಗಳೆಲ್ಲವೂ ಅರಬ್‌ ನಾಡಿನ ಬೃಹತ್‌ ಮೈದಾನ ಖ್ಯಾತಿಯ ಅಬುಧಾಬಿ, ದುಬಾೖ ಅಂಗಳದಲ್ಲಿ ನಡೆದಿತ್ತು. “ಶಾರ್ಜಾ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ ನಲ್ಲಿ ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನಾಡಲಿದೆ. ಆರ್‌ಸಿಬಿಯ ಪ್ರದರ್ಶನವನ್ನು ಅಷ್ಟು ಬಲವಾಗಿ ನಂಬುವುದು ಕಷ್ಟ. ಯಾಕೆಂದರೆ ತಂಡ ಸ್ಥಿರವಾದ ನಿರ್ವಹಣೆ ನೀಡಿದ ನಿದರ್ಶನವಿಲ್ಲ.

ಮಿಸ್ಟರ್‌ 360 ಖ್ಯಾತಿಯ ಎಬಿ ಡಿ’ವಿಲಿಯರ್ ಈ ಬಾರಿಯ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವುತ್ತಿರುವುದು ನಾಯಕ ಕೊಹ್ಲಿಗೆ ಚಿಂತೆಗೀಡು ಮಾಡಿದೆ. ಆಸೀಸ್‌ ಬಿಗ್‌ ಹಿಟ್ಟರ್‌ ಫಿಂಚ್‌ ಕೂಡ ಕೇವಲ ಒಂದು ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರೆ ಇನ್ನು ಳಿದ ಪಂದ್ಯಗಳಲ್ಲಿ ವೈಫ‌ಲ್ಯ ಅನುಭವಿಸಿದ್ದಾರೆ. ನಾಯಕ ಕೊಹ್ಲಿ, ಪಡಿಕ್ಕಲ್‌ ಉತ್ತಮ ಬ್ಯಾಟಿಂಗ್‌ ಫಾರ್ಮ್ ನಲ್ಲಿದ್ದು ಈ ಪಂದ್ಯ ದಲ್ಲಿಯೂ ತಂಡ ಇವರ ಮೇಲೆ ಹೆಚ್ಚು ನಂಬಿಕೆ ಇರಿಸಿಕೊಂಡಿದೆ.

ಆಲ್‌ರೌಂಡರ್‌ ಮಾರಿಸ್‌ ಸೇರ್ಪಡೆಯಿಂದ ಆರ್‌ಸಿಬಿ ಬೌಲಿಂಗ್‌ ಇನ್ನಷ್ಟು ಬಲಿಷ್ಠವಾಗಿದೆ. ಮಾರಿಸ್‌ ಅವರಿಗೆ ಲಂಕಾ ವೇಗಿ ಇಸುರು ಉದಾನ, ನವದೀಪ್‌ ಸೈನಿ, ಚಹಲ್‌ ಉತ್ತಮ ಬೆಂಬಲ ನೀಡಬಲ್ಲರು. ಆದ್ದರಿಂದ ಬೌಲಿಂಗ್‌ ವಿಭಾಗ ಬಲಿಷ್ಠವಾಗಿಯೇ ಗೊಚರಿಸುತ್ತಿದೆ.

ಕೆಕೆಆರ್‌ ಪಾಳಯದಲ್ಲಿ ಬಲಿಷ್ಠ ಆಟಗಾರರಿದ್ದರೂ ಇದುವರೆಗೆ ಕೆಲವೇ ಕೆಲವು ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಿದ್ದಾರೆ. ಕೆಕೆಆರ್‌ ಗೆಲುವಿನ ಹಿನ್ನೋಟವನ್ನು ಗಮನಿಸುವುದಾದರೆ ಸೋಲುವ ಪಂದ್ಯಗಳನ್ನೇ ಹೆಚ್ಚಾಗಿ ತಂಡ ಅದೃಷ್ಟದ ಬಲದಿಂದ ಗೆದ್ದುಕೊಂಡಿದೆ. ನಾಯಕ ದಿನೇಶ್‌ ಕಾರ್ತಿಕ್‌ ಮತ್ತೆ ಫಾರ್ಮ್ ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ರಸೆಲ್‌ ಈ ಬಾರಿ ಸ್ಫೋಟಕ ಬ್ಯಾಟಿಂಗ್‌ ನಡೆಸಲು ಪರದಾಡುತ್ತಿದ್ದಾರೆ. ಬೌಲಿಂಗ್‌ ವಿಚಾರದಲ್ಲಿ ಸುನೀಲ್‌ ನಾರಾಯಣ್‌, ಪ್ರಸಿದ್ಧ ಕೃಷ್ಣ, ಪ್ಯಾಟ್‌ ಕಮಿನ್ಸ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.