Thursday, 26th December 2024

KL Rahul: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿಶೇಷ ಸಾಧನೆ ಮಾಡಿದ ಕನ್ನಡಿಗ ರಾಹುಲ್‌

ಮೆಲ್ಬರ್ನ್‌: ಕನ್ನಡಿಗ ಕೆಎಲ್​ ರಾಹುಲ್(KL Rahul)​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಶಕದ ಸಂಭ್ರಮವನ್ನು ಆಚರಿಸಿದ್ದಾರೆ. ಇಂದು(ಗುರುವಾರ) ಆಸೀಸ್‌ ವಿರುದ್ಧದ ನಾಲ್ಕನೇ ಟೆಸ್ಟ್‌(Australia vs India) ಪಂದ್ಯದಲ್ಲಿ ಮೈದಾನಕ್ಕಿಳಿಯುವ ಮೂಲಕ ಈ ಮೈಲುಗಲ್ಲು ತಲುಪಿದರು. 2014ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲೇ ರಾಹುಲ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಇದೀಗ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲೇ ಕಣಕ್ಕಿಳಿಯುವ ಮೂಲಕ 10 ವರ್ಷಗಳನ್ನು ಪೂರೈಸಿದರು. ಇದೇ ವೇಳೆ 10 ವರ್ಷಗಳ ಕಾಲ ಆಡಿದ 8ನೇ ಕನ್ನಡಿಗ ಎನಿಸಿಕೊಂಡರು.

ಅಂದು ರಾಹುಲ್​, ಡಿಸೆಂಬರ್​ 26ರಿಂದ 30ರವರೆಗೆ ಆಡಿದ ಚೊಚ್ಚಲ ಟೆಸ್ಟ್​ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 3 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 1 ರನ್​ ಗಳಿಸಿ ನಿರಾಸೆ ಅನುಭವಿಸಿದ್ದರು. ಸಿಡ್ನಿಯಲ್ಲಿ ನಡೆದಿದ್ದ 2ನೇ ಟೆಸ್ಟ್​ನಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ನಿರೂಪಿಸಿದ್ದರು. 2016ರಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಮೂಲಕ ರಾಹುಲ್​ ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡದ ಪ್ರಮುಖ ಭಾಗವಾಗಿದ್ದರು. ಇದುವರೆಗೆ ಆಡಿರುವ 205 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟಾರೆ 17 ಶತಕಗಳ ಸಹಿತ 8 ಸಾವಿರಕ್ಕೂ ಅಧಿಕ ರನ್​ ಬಾರಿಸಿದ್ದಾರೆ.

ಹ್ಯಾಟ್ರಿಕ್‌ ಶತಕದ ನಿರೀಕ್ಷೆ

ಕೆ.ಎಲ್‌ ರಾಹುಲ್​ಗೆ ಬಾಕ್ಸಿಂಗ್​ ಡೇ ಟೆಸ್ಟ್​ಗಳು ಸ್ಮರಣೀಯವೆನಿಸಿವೆ. ಕಳೆದ ಎರಡು ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದ ರಾಹುಲ್‌, ಈ ಬಾರಿ ಶತಕ ಬಾರಿಸಿದರೆ, ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಹ್ಯಾಟ್ರಿಕ್​ ಶತಕ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಈ ಮುನ್ನ 2021ರಲ್ಲಿ ದಕ್ಷಿಣ ಆಫ್ರಿಕಾದ ಸೆಂಚುರಿಯನ್​ನಲ್ಲಿ ಆಡಿದ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ 123 ರನ್,​ 2023ರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧವೇ ಮತ್ತೊಂದು ಶತಕ ಬಾರಿಸಿದ್ದರು.

ಬೃಹತ್‌ ಮೊತ್ತದತ್ತ ಆಸೀಸ್‌

ನಾಲ್ಕನೇ ಟೆಸ್ಟ್‌ನ ಮೊದಲ ದಿನದಾಟವೇ ಆಸ್ಟ್ರೇಲಿಯಾ 6 ವಿಕೆಟ್‌ಗೆ 311 ರನ್‌ ಬಾರಿಸಿ ಬೃಹತ್‌ ಮೊತ್ತ ಪೇರಿಸುವ ಸೂಚನೆ ನೀಡಿದೆ. ಸದ್ಯ ಸ್ಟೀವನ್‌ ಸ್ಮಿತ್‌(68) ಮತ್ತು ಪ್ಯಾಟ್‌ ಕಮಿನ್ಸ್‌(8) ಕ್ರೀಸ್‌ನಲ್ಲಿದ್ದಾರೆ.