Tuesday, 26th November 2024

KL Rahul: ರಾಹುಲ್‌ಗೆ ಮತ್ತೆ ಅವಮಾನಿಸಿದ ಗೋಯೆಂಕಾ?

ಲಕ್ನೋ: ಕನ್ನಡಿಗ ಕೆ.ಎಲ್‌ ರಾಹುಲ್‌(KL Rahul) ಲಕ್ನೋ ಸೂಪರ್ ಜೈಂಟ್ಸ್‌ ತಂಡದಿಂದ ಹೊರ ಬಂದ ಬೆನ್ನಲ್ಲೇ ಫ್ರಾಂಚೈಸಿ ಮಾಲಕ ಸಂಜೀವ್‌ ಗೋಯೆಂಕಾ (Sanjiv Goenka) ನಾಲಿಗೆ ಹರಿಬಿಟ್ಟಿದ್ದು ಪರೋಕ್ಷವಾಗಿ ರಾಹುಲ್‌ಗೆ ಅವಮಾನ ಮಾಡಿದ್ದಾರೆ.

ರಾಹುಲ್‌ ಅವರನ್ನು ಲಕ್ನೋ ತಂಡ ಮುಂದಿನ ಆವೃತ್ತಿಗೂ ರಿಟೇನ್‌ ಮಾಡಲು ಮುಂದಾಗಿತ್ತು. ಆದರೆ ರಾಹುಲ್‌ ವೈಯಕ್ತಿಕ ಕಾರಣ ನೀಡಿ ತಂಡದಿಂದ ಬಿಡಿಗಡೆ ಮಾಡುವಂತೆ ಫ್ರಾಂಚೈಸಿ ಬಳಿ ಕೇಳಿಕೊಂಡಿದ್ದರು. ಅದರಂತೆ ರಾಹುಲ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದರ ಬೆನ್ನಲ್ಲೇ ಗೋಯೆಂಕಾ ಅವರು ರಾಹುಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

‘ನಮಗೆ ತಂಡಕ್ಕಾಗಿ ಆಡುವ ಮತ್ತು ಗೆಲ್ಲುವ ಮನಸ್ಥಿತಿಯ ಆಟಗಾರರು ಬೇಕು. ಸ್ವ ಹಿತಾಸಕ್ತಿಗೆ ಆಡುವ ಆಟಗಾರರನ್ನು ತಂಡದಲ್ಲಿ ಇಟ್ಟುಕೊಳ್ಳಲು ಬಯಸುವುದಿಲ್ಲ’ ಎಂದು ಸಂಜೀವ್‌ ಗೋಯೆಂಕಾ ಹೇಳಿದ್ದಾರೆ. ಇದು ರಾಹುಲ್ ಕುರಿತಾಗಿಯೇ ನೀಡಿರುವ ಹೇಳಿಕೆ ಎನ್ನಲಾಗಿದ್ದು ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಮೈದಾನದಲ್ಲಿಯೇ ರಾಹುಲ್‌ರನ್ನು ಗೋಯೆಂಕಾ ಬೈದು ಅವಮಾನಿಸಿದ್ದರು. ಆ ಘಟನೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಸ್ವಾಭಿಮಾನ ಬಿಟ್ಟು ನೀವು ಆ ತಂಡದಲ್ಲಿ ಇರಬೇಡಿ, ಮುಂದಿನ ಸಲ ಆರ್ಸಿಬಿಗೆ ಬನ್ನಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದರು. ಅದರಂತೆ ರಾಹುಲ್ ಲಕ್ನೋ ತಂಡ ತೊರೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ IPL 2025 Retention: ರಿಟೇನ್‌ನಲ್ಲಿ ಗರಿಷ್ಠ ಮೊತ್ತ ಪಡೆದ ಟಾಪ್ 10 ಆಟಗಾರರು

ಲಕ್ನೋ ತಂಡ ಒಟ್ಟು 5 ಆಟಗಾರರನ್ನು ರಿಟೇನ್‌ ಮಾಡಿಕೊಂಡಿದೆ. ವಿಂಡೀಸ್‌ ಆಟಗಾರ ನಿಕೋಲಸ್ ಪೂರನ್(21 ಕೋಟಿ ರೂ.), ಮಯಾಂಕ್ ಯಾದವ್(11 ಕೋಟಿ ರೂ), ರವಿ ಬಿಷ್ಣೋಯ್(11 ಕೋಟಿ ರೂ.), ಮೊಹ್ಸಿನ್ ಖಾನ್(4 ಕೋಟಿ ರೂ.), ಆಯುಷ್ ಬದೋನಿ (4 ಕೋಟಿ ರೂ.) ಉಳಿಸಿಕೊಂಡ ಆಟಗಾರರು. ಪೂರನ್‌ಗೆ ತಂಡದ ನಾಯಕತ್ವ ನೀಡಲಾಗಿದೆ.

ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಯುಧ್ವಿರ್ ಸಿಂಗ್ ಚರಕ್, ಅರ್ಷದ್ ಖಾನ್, ನವೀನ್-ಉಲ್-ಹಕ್, ದೇವದತ್ ಪಡಿಕ್ಕಲ್, ಪ್ರೇರಕ್ ಮಂಕಡ್, ಮಣಿಮಾರನ್ ಸಿದ್ಧಾರ್ಥ್, ಕೃಷ್ಣಪ್ಪ ಗೌತಮ್, ಆಶ್ಟನ್ ಟರ್ನರ್, ಅಮಿತ್ ಮಿಶ್ರಾ, ಕೈಲ್ ಮೇಯರ್ಸ್, ಮ್ಯಾಟ್ ಹೆನ್ರಿ, ಶಮರ್ ಜೋಸೆಫ್, ಯಶ್ ಠಾಕೂರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.