Sunday, 22nd December 2024

KL Rahul: ಅಭ್ಯಾಸದ ವೇಳೆ ರಾಹುಲ್‌ಗೆ ಗಾಯ; 4ನೇ ಟೆಸ್ಟ್‌ಗೆ ಅನುಮಾನ

ಮೆಲ್ಬರ್ನ್: ಮೂರನೇ ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಬೇಕಿದ್ದರೆ ರೋಹಿತ್‌ ಶರ್ಮ ಪಡೆಗೆ ಮೆಲ್ಬರ್ನ್ ಮೇಲಾಟ ಅತ್ಯಂತ ಮಹತ್ವದ್ದಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಆತಂಕವೊಂದು ಎದುರಾಗಿದೆ. ಶನಿವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುವ ವೇಳೆ ಕೆ.ಎಲ್‌ ರಾಹುಲ್‌(KL Rahul) ಕೈಗೆ ಗಾಯ ಮಾಡಿಕೊಂಡಿದ್ದಾರೆ.

ಅಭ್ಯಾಸ ನಡೆಸುತ್ತಿದ್ದ ವೇಳೆ ಚೆಂಡು ರಾಹುಲ್‌ ಅವರ ಎಡಗೈಗೆ ಬಡಿದು ಅವರು ನೋವಿನಿಂದ ನರಳಿದ್ದಾರೆ. ಗಾಯಗೊಂಡ ರಾಹುಲ್‌ ಅವರನ್ನು ತಕ್ಷಣ ಫಿಸಿಯೊಗಳು ಪರೀಕ್ಷೆ ಮಾಡಿ ಗಾಯಕ್ಕೆ ಚಿಕಿತ್ಸೆ ನೀಡಿದ್ದಾರೆ. ಸದ್ಯ ರಾಹುಲ್‌ ಗಾಯದ ಬಗ್ಗೆ ಯಾವುದೇ ಅಪ್‌ಡೇಟ್‌ ಹೊರಬಿದ್ದಿಲ್ಲ. ಆಸೀಸ್‌ ವಿರುದ್ಧ ನಡೆದಿರುವ ಮೂರು ಪಂದ್ಯಗಳಲ್ಲಿಯೂ ಭಾರತ ಪರ ಶ್ರೇಷ್ಠ ಪ್ರದರ್ಶನ ತೋರಿದ್ದು ಕೆ.ಎಲ್‌ ರಾಹುಲ್‌ ಮಾತ್ರ. ಇದೀಗ ಅವರಿಗೆ ಗಾಯಗೊಂಡಿರುವುದು ತಂಡಕ್ಕೆ ಆತಂಕ ಉಂಟುಮಾಡಿದೆ.

ಇದನ್ನೂ ಓದಿ Boxing Day Test: ಬಾಕ್ಸಿಂಗ್​ ಡೇ ಟೆಸ್ಟ್​ ಎಂದರೇನು? ಇದರ ಮಹತ್ವವೇನು?

ಶನಿವಾರ ಟೀಮ್‌ ಇಂಡಿಯಾದ ಎಲ್ಲ ಆಟಗಾರರು ಹೆಚ್ಚುವರಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ವಿರಾಟ್‌ ಕೊಹ್ಲಿ,ರೋಹಿತ್‌ ಶರ್ಮ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಾಲ್ಕನೇ ಪಂದ್ಯ ಡಿ.26 ರಂದು ನಡೆಯಲಿದೆ. ಈ ಬಾರಿಯ ಭಾರತ ಮತ್ತು ಆಸೀಸ್‌ ಪಂದ್ಯದ ಮೊದಲ ದಿನದಾಟದ ಟಿಕೆಟ್‌ಗಳೆಲ್ಲ ಈಗಾಗಲೇ ಸೋಲ್ಡ್‌ ಔಟ್‌ ಆಗಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ತಿಳಿಸಿದೆ.

ಭಾರತ ತಂಡ ಇದುವರೆಗೂ 17 ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯಗಳನ್ನು ಆಡಿದೆ. ಇದರಲ್ಲಿ ಗೆದ್ದಿದ್ದು 4 ಪಂದ್ಯಗಳನ್ನು ಮಾತ್ರ. ಕೊನೆಯ ಬಾರಿ ಭಾರತ ಬಾಕ್ಸಿಂಗ್​ ಡೇ ಟೆಸ್ಟ್​ ಗೆಲುವು ಸಾಧಿಸಿದ್ದು 2021ರಲ್ಲಿ. ಸೆಂಚುರಿಯನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ. 113 ರನ್‌ಗಳ ಗೆಲುವು ಒಲಿದಿತ್ತು.

ಗೆಲ್ಲಲೇ ಬೇಕು ಭಾರತ

ಬ್ರಿಸ್ಬೇನ್ ಟೆಸ್ಟ್‌ ಪಂದ್ಯ ಡ್ರಾಗೊಂಡಿರುವ ಕಾರಣ ಭಾರತದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ ಕಠಿಣಗೊಂಡಿದೆ. ಫೈನಲ್‌ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ‌ಉಳಿದೆರಡು ಪಂದ್ಯಗಳನ್ನು ಗೆಲ್ಲಬೇಕು. ಆಗ ಗೆಲುವಿನ ಶೇಕಡಾ ವಾರನ್ನು 60.52ಕ್ಕೆ ಏರಿಸಲು ಅವಕಾಶವಿದೆ. ಒಂದು ಪಂದ್ಯ ಸೋತರೂ ಭಾರತ ಫೈನಲ್‌ ರೇಸ್‌ನಿಂದ ಬಹುತೇಕ ಹೊರಬೀಳಲಿದೆ. ಒಂದು ವೇಳೆ ಭಾರತ 2 ಪಂದ್ಯದಲ್ಲಿ 1 ಪಂದ್ಯ ಸೋತು ಅಥವಾ ಡ್ರಾಗೊಳಿಸಿಕೊಂಡರೆ, ಆಗ ಆಸೀಸ್‌ -ಲಂಕಾ ನಡುವಿನ 2 ಪಂದ್ಯಗಳ ಸರಣಿಯ ಫ‌ಲಿತಾಂಶವನ್ನು ಭಾರತ ಅವಲಂಬಿಸಬೇಕಾಗುತ್ತದೆ. ಸದ್ಯ ಭಾರತದ ಗೆಲುವಿನ ಶೇಕಡವಾರು ಅಂಕ 55.88 ರಷ್ಟಿದೆ.