ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿರುವ ಕನ್ನಡಿಗ ಕೆ.ಎಲ್ ರಾಹುಲ್(KL Rahul) ದಾಖಲೆಯೊಂದನ್ನು ಬರೆಯುವ ಸನಿಹದಲ್ಲಿದ್ದಾರೆ.
32 ವರ್ಷದ ರಾಹುಲ್ ಪಾಲಿಗೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ(Boxing Day Test) ಎನ್ನುವುದು ವಿಶೇಷವಾಗಿದೆ. ಕಾರಣ ಅವರು ಈ ಹಿಂದೆ ಆಡಿದ 2 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿಯೂ ಶತಕ ಬಾರಿಸಿ ಮಿಂಚಿದ್ದರು. ಈ ಎರಡೂ ಶತಕ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲಾಗಿತ್ತು. 2021ರಲ್ಲಿ ಮತ್ತು 2023ರಲ್ಲಿ ರಾಹುಲ್ ಶತಕ ಬಾರಿಸಿದ್ದರು.
ಇದೀಗ ನಾಳೆ(ಡಿ.26) ಆರಂಭವಾಗಲಿರುವ ಆಸೀಸ್ ವಿರುದ್ಧದ ಟೆಸ್ಟ್‌ನಲ್ಲಿ ರಾಹುಲ್ ಶತಕ ಬಾರಿಸಿದರೆ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಮೂರು ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ರಹಾನೆ, ಸಚಿನ್ ಜತೆ 2 ಶತಕ ಬಾರಿಸಿ ಜಂಟಿ ದಾಖಲೆ ಹೊಂದಿದ್ದಾರೆ. ಮೆಲ್ಬರ್ನ್ ಕ್ರೀಡಾಂಗಣದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಪೇರಿಸಿದ ಭಾರತೀಯ ದಾಖಲೆ ವಿರೇಂದ್ರ ಸೆಹವಾಗ್ ಹೆಸರಿನಲ್ಲಿದೆ. ಸೆಹವಾಗ್ 2003ರಲ್ಲಿ 195 ರನ್ ಬಾರಿಸಿದ್ದರು.
ಇದನ್ನೂ ಓದಿ AUS vs IND: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತದ ಸಾಧನೆ ಹೇಗಿದೆ?
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಅತ್ಯಧಿಕ ಟೆಸ್ಟ್ ರನ್ ಗಳಿಸಿದ ಭಾರತೀಯ ದಾಖಲೆ ಸದ್ಯ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 5 ಪಂದ್ಯಗಳನ್ನಾಡಿ 449 ರನ್ ಬಾರಿಸಿದ್ದಾರೆ. ಸಚಿನ್ ಬಳಿಕ ಅಜಿಂಕ್ಯ ರಹಾನೆ 3 ಪಂದ್ಯಗಳಿಂದ 369 ರನ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು 3 ಪಂದ್ಯಗಳಿಂದ 316 ರನ್ ಗಳಿಸಿದ್ದಾರೆ. ಕೊಹ್ಲಿ ಇದೀಗ 53 ರನ್ ಬಾರಿಸಿದರೆ, ರಹಾನೆ ದಾಖಲೆ, 133 ರನ್ ಬಾರಿಸಿದರೆ ಸಚಿನ್ ದಾಖಲೆ ಮುರಿಯಲಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಒಟ್ಟು 6 ವಿಕೆಟ್ ಕಿತ್ತರೆ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪೂರ್ತಿಗೊಳಿಸಲಿದ್ದಾರೆ. ಈ ಸಾಧನೆಗೈದ ಭಾರತದ 6ನೇ ವೇಗಿ ಎನಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ 12ನೇ ಭಾರತೀಯ ಬೌಲರ್ ಆಗಲಿದ್ದಾರೆ. ಕಪಿಲ್ ದೇವ್, ಇಶಾಂತ್ ಶರ್ಮಾ, ಜಾವಗಲ್ ಶ್ರೀನಾಥ್, ಜಹೀರ್ ಖಾನ್ ಮತ್ತು ಮೊಹಮ್ಮದ್ ಶಮಿ ಮಾತ್ರ 200 ಪ್ಲಸ್ ವಿಕೆಟ್ ಕಿತ್ತಿದ್ದಾರೆ.