ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಐಪಿಎಲ್‌ನಲ್ಲಿ 500 ಬೌಂಡರಿ ಬಾರಿಸಿದ ದಾಖಲೆ ಪೂರೈಸಿಕೊಂಡಿದ್ದಾರೆ. ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ತೋರಿದ್ದಾರೆ.
ಅಬುಧಾಬಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೊಹ್ಲಿ 18 ರನ್ ಬಾರಿಸಿದರು. ಇದರಲ್ಲಿ 2 ಫೊರ್‌ಗಳು ಕೂಡ ಸೇರಿತ್ತು. ಪಂದ್ಯದಲ್ಲಿ ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ ಭರ್ಜರಿ 8 ವಿಕೆಟ್‌ಗಳಿಂದ ಸುಲಭ ಜಯ ಗಳಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್, ಇಯಾನ್ ಮಾರ್ಗನ್ 30, ಲಾಕಿ ಫಾರ್ಗುಸನ್ 19 ರನ್ ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 84 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ, ದೇವದತ್ ಪಡಿಕ್ಕಲ್ 25, ಆಯರನ್ ಫಿಂಚ್ 16, ಗುರುಕೀರತ್ ಸಿಂಗ್ 21, ಕೊಹ್ಲಿ 18 ರನ್‌ನೊಂದಿಗೆ 13.3 ಓವರ್‌ಗೆ 2 ವಿಕೆಟ್ ಕಳೆದು 85 ರನ್ ಗಳಿಸಿತು.
ಈವರೆಗೆ ಒಟ್ಟು 187 ಐಪಿಎಲ್ ಪಂದ್ಯಗಳನ್ನಾಡಿರುವ ವಿರಾಟ್ 38.77ರ ಸರಾಸರಿಯಲ್ಲಿ 5777 ರನ್ ಗಳಿಸಿದ್ದಾರೆ. ಇದರಲ್ಲಿ 500 ಬೌಂಡರಿಗಳು, 199 ಸಿಕ್ಸರ್‌ಗಳು ಸೇರಿವೆ. ಐಪಿಎಲ್‌ನಲ್ಲಿ 500 ಫೋರ್ಸ್ ಬಾರಿಸಿದ ಎರಡನೇ ಆಟಗಾರ ಕೊಹ್ಲಿ. ಶಿಖರ್ ಧವನ್ ಈಗಾಗಲೇ 575 ಬೌಂಡರಿಗಳ ದಾಖಲೆ ಹೊಂದಿದ್ದಾರೆ.