ಬೆಂಗಳೂರು: 2024, ಕ್ರಿಕೆಟ್ನಲ್ಲಿ(Legends Retired in 2024) ಸಾಲು ಸಾಲು ಆಟಗಾರರು ವಿದಾಯ ಘೋಷಿಸಿದ ವರ್ಷ. ಇದರಲ್ಲಿ ಹೆಚ್ಚು ವಿದಾಯ ಹೇಳಿದ್ದು ಭಾರತೀಯ ಆಟಗಾರರು ಎನ್ನುವುದು ಬೇಸರದ ಸಂಗತಿ. ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವಿಂದ್ರ ಜಡೇಜಾ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಬಳಿಕ ಶಿಖರ್ ಧವನ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಸೌರಭ್ ತಿವಾರಿ, ವೃದ್ಧಿಮಾನ್ ಸಾಹ, ಸಿದ್ಧಾರ್ಥ್ ಕೌಲ್, ವರುಣ್ ಆರನ್, ಬರಿಂದರ್ ಸ್ರಾನ್ ಎಲ್ಲ ಮಾದರಿಗೆ ವಿದಾಯ ಹೇಳಿದ್ದರು. ಈ ಸಾಲಿಗೆ ಆರ್. ಅಶ್ವಿನ್ ಹೊಸ ಸೇರ್ಪಡೆ. ಬುಧವಾರದಂದು ದಿಢೀರ್ ಆಗಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು.
ಭಾರತೀಯರಲ್ಲೇ ಈ ವರ್ಷ ವಿದಾಯ ಹೇಳಿದ ಪ್ರಮುಖ ವಿದೇಶಿ ಆಟಗಾರರ ಪಟ್ಟಿ ಹೀಗಿದೆ. ಆಸ್ಟ್ರೆಲಿಯಾದ ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್, ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್, ನ್ಯೂಜಿಲೆಂಡ್ನ ಕಾಲಿನ್ ಮುನ್ರೋ, ನೀಲ್ ವ್ಯಾಗ್ನರ್, ಟಿಮ್ ಸೌಥಿ, ಇಂಗ್ಲೆಂಡ್ನ ಜೇಮ್ಸ್ ಆಂಡರ್ಸನ್, ಮೊಯಿನ್ ಅಲಿ, ಡೇವಿಡ್ ಮಲಾನ್, ಪಾಕಿಸ್ತಾನದ ಮೊಹಮದ್ ಆಮಿರ್, ಇಮಾದ್ ವಾಸಿಂ ಎಲ್ಲ ಮಾದರಿಗೆ ವಿದಾಯ ಹೇಳಿದ್ದರು.
ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಟೆಸ್ಟ್, ಟಿ20ಗೆ ವಿದಾಯ ಹೇಳಿದ್ದರೆ, ಮಹಮದುಲ್ಲಾ ಟಿ20ಗೆ ವಿದಾಯ ಹೇಳಿದ್ದರು. ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ಟೆಸ್ಟ್ಗೆ, ನ್ಯೂಜಿಲೆಂಡ್ನ ಟ್ರೆಂಟ್ ಬೌಲ್ಟ್ ಟಿ20ಗೆ ವಿದಾಯ ಹೇಳಿದ್ದರು. ಇನ್ನೇನೆಷ್ಟು ಆಟಗಾರರು ವಿದಾಯ ಹೇಳಲಿದ್ದಾರೆ ಎಂದು ಕಾದು ನೋಡಬೇಕಿದೆ. ಒಟ್ಟಾರೆ 2024 ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅತ್ಯಂತ ದುಖಃದ ವರ್ಷವಾಗಿದೆ.
ಅಶ್ವಿನ್ ದಿಢೀರ್ ವಿದಾಯ ನಿರ್ಧಾರಕ್ಕೆ ಕಾರಣವೇನು?
ಬೆಂಗಳೂರು: ಭಾರತ ಮತ್ತು ಆಸೀಸ್ ನಡುವಣ ಟೆಸ್ಟ್ ಸರಣಿಯ ಮಧ್ಯದಲ್ಲೇ ದಿಢೀರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್. ಅಶ್ವಿನ್(R Ashwin) ವಿದಾಯ ಹೇಳಿರುವುದು ಅಚ್ಚರಿಗೆ ಕಾರಣವಾಗಿತ್ತು. ಅಶ್ವಿನ್ ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಚರ್ಚೆಗಳು ನಡೆಯುತ್ತಿದೆ.
ವರದಿಯೊಂದರ ಪ್ರಕಾರ ಭಾರತ ತಂಡದಲ್ಲಿ ಮೊದಲ ಆಯ್ಕೆಯ ಸ್ಪಿನ್ನರ್ ಆಗಿರದಿದ್ದರೆ ಗುಡ್ಬೈ ಹೇಳುವುದೇ ಸೂಕ್ತ ಎಂಬ ಅಶ್ವಿನ್ ನಿಲುವೇ ನಿವೃತ್ತಿ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಆದರೆ ನಿವೃತ್ತಿ ನಿರ್ಧಾರಕ್ಕೆ ಮುನ್ನ ಅಶ್ವಿನ್ ಆಯ್ಕೆಗಾರರೊಂದಿಗೆ ಚರ್ಚಿಸಿಲ್ಲ ಎಂದೂ ಬಿಸಿಸಿಐ ಮೂಲಗಳು ತಿಳಿಸಿವೆ.
ಆಸೀಸ್ ಸರಣಿಯ ಅಡಿಲೇಡ್ ಟೆಸ್ಟ್‌ನಲ್ಲಿ ಅಶ್ವಿನ್‌ಗೆ ಅವಕಾಶ ನೀಡಲಾಗಿತ್ತು. ಆ ಬಳಿಕ ಮುಂದಿನ ಪಂದ್ಯಕ್ಕೆ ಅವರನ್ನು ಕೈಬಿಡಲಾಗಿತ್ತು. ಅಡಿಲೇಡ್ ಟೆಸ್ಟ್‌ನಲ್ಲಿ ಅಶ್ವಿನ್ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ.ಎರಡೂ ಇನಿಂಗ್ಸ್ ಬೌಲಿಂಗ್ ನಡೆಸಿದರೂ ಕೇವಲ ಒಂದು ವಿಕೆಟ್ ಮಾತ್ರ ಪಡೆದಿದ್ದರು. ಸರಣಿಯ ಕೊನೇ 2 ಟೆಸ್ಟ್ಗಳಲ್ಲೂ ಅಶ್ವಿನ್ರನ್ನು ಆಡಿಸುವ ಸಾಧ್ಯತೆ ಇರಲಿಲ್ಲ. ಇದೇ ಬೇಸರದಲ್ಲಿ ಅವರು ನಿವೃತ್ತಿ ಹೇಳಿದಂತಿದೆ. ಯುವ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ರನ್ನು ಅಶ್ವಿನ್ ಉತ್ತರಾಧಿಕಾರಿ ಎಂದು ಗುರುತಿಸಿದೆ. ಸುಂದರ್ ಕೂಡ ತಮಿಳುನಾಡಿನವರೇ ಆಗಿದ್ದಾರೆ. ಸುಂದರ್‌ಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿಯೂ ಅಶ್ವಿನ್ ನಿವೃತ್ತಿ ನಿರ್ಧಾರ ಕೈಗೊಂಡಿರಬಹುದು ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಒಟ್ಟಾರೆ ಅಶ್ವಿನ್ ನಿವೃತ್ತಿ ನಿರ್ಧಾರ ಮಾತ್ರ ನಿಗೂಡ. ಇದಕ್ಕೆ ಉತ್ತರ ಅಶ್ವಿನ್ ಬಳಿಯೇ ಇದೆ.