ದುಬೈ: ಐಪಿಎಲ್ ನಲ್ಲಿ ನಾಯಕನಾಗಿ ಗರಿಷ್ಠ ಪಂದ್ಯಗಳಲ್ಲಿ ಜಯ(107) ಹಾಗೂ ಹೆಚ್ಚು ಸ್ಟಂಪಿಂಗ್ (38) ಸಹಿತ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಸೋಮವಾರ ಮೈಲಿಗಲ್ಲನ್ನು ನಿರ್ಮಿಸಿದರು.
ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಐಪಿಎಲ್ ನಲ್ಲಿ 200 ಪಂದ್ಯಗಳನ್ನು ಆಡಿರುವ ಮೊದಲ ಹಾಗೂ ಏಕೈಕ ಕ್ರಿಕೆಟಿಗನಾಗಿದ್ದಾರೆ.
ರಾಜಸ್ಥಾನ ವಿರುದ್ಧ ಪಂದ್ಯಕ್ಕಿಂತ ಮೊದಲು 199 ಪಂದ್ಯಗಳನ್ನು ಆಡಿರುವ ಧೋನಿ, ಚೆನ್ನೈನ ಸಹ ಆಟಗಾರ ಸುರೇಶ್ ರೈನಾ ದಾಖಲೆಯನ್ನು ಮುರಿದಿದ್ದಾರೆ. ರಾಜಸ್ಥಾನ ವಿರುದ್ಧ ಪಂದ್ಯ ಆಡಿದಾಗ ಐಪಿಎಲ್ ನಲ್ಲಿ ದಾಖಲೆ 200 ಪಂದ್ಯಗಳನ್ನು ಆಡಿದ ಸಾಧನೆಗೆ ಪಾತ್ರರಾದರು.
ಧೋನಿ 2008ರಿಂದ ಚೆನ್ನೈ ತಂಡದಲ್ಲಿದ್ದಾರೆ. 200 ಪಂದ್ಯಗಳ ಪೈಕಿ 170 ಪಂದ್ಯಗಳನ್ನು ಚೆನ್ನೈ ಪರ ಆಡಿದ್ದಾರೆ. ಚೆನ್ನೈ ಎರಡು ವರ್ಷ ನಿಷೇಧಕ್ಕೊಳಗಾದ ವೇಳೆ ಇನ್ನುಳಿದ 30 ಪಂದ್ಯಗಳನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಆಡಿದ್ದರು.
ರೈನಾ 193 ಪಂದ್ಯಗಳು, ಕೋಲ್ಕತಾದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ 191 ಪಂದ್ಯಗಳಲ್ಲಿ ಆಡುವುದರೊಂದಿಗೆ ಧೋನಿ ದಾಖಲೆಯ ಸಮೀಪದಲ್ಲಿದ್ದಾರೆ. ಧೋನಿ ಐಪಿಎಲ್ ನಲ್ಲಿ 4,568 ರನ್ ಗಳಿಸಿದ್ದು, ಚೆನ್ನೈ ಪರ 3,994 ರನ್ ಗಳಿಸಿದ್ದರು.