ನವದೆಹಲಿ: ಇತ್ತೀಚೆಗೆ ಮುಕ್ತಾಯ ಕಂಡಿದ್ದ ಪ್ಯಾರಿಸ್ ಒಲಿಂಪಿಕ್ಸ್(Paris Olympic) ಶೂಟಿಂಗ್ನಲ್ಲಿ ಅವಳಿ ಪದಕ ಗೆದ್ದಿದ್ದ ಮನು ಭಾಕರ್(Manu Bhaker) ತಮ್ಮ ವಿರುದ್ಧ ಟ್ರೋಲ್ ಮಾಡಿದವರಿಗೆ ತಕ್ಕ ತಿರುಗೇಟು ನೀಡಿದ್ದಾರೆ. ನಾನು ಗೆದ್ದ ಪದಕವನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯುತ್ತೇನೆ ಇದನ್ನು ಪ್ರಶ್ನಿಸುವ ಅಧಿಕಾರ ನಿಮಗಿಲ್ಲ ಎಂದು ತೀಕ್ಷ್ಣವಾಗಿಯೇ ಟ್ರೋಲಿಗರಿಗೆ ಪ್ರತಿಕ್ರಿಯೆ(Manu Bhaker Gives Fiery Reply) ನೀಡಿದ್ದಾರೆ.
ಮನು ಅವರು ಅವಳಿ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್ ಅಭಿಯಾನದಲ್ಲಿ ಎರಡು ಶೂಟಿಂಗ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ಇತಿಹಾಸವನ್ನು ಬರೆದಿದ್ದರು. ಅವರು 10 ಮೀಟರ್ ಏರ್ ಪಿಸ್ತೂಲ್ ಕೂಟದಲ್ಲಿ ಮತ್ತು ಮಿಶ್ರ ತಂಡ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚು ಗೆದ್ದಿದ್ದರು.
ಶೂಟರ್ ಮನು ಭಾಕರ್ ಪ್ರಶಸ್ತಿ ಗೆದ್ದು ದೇಶಕ್ಕೆ ಕೀರ್ತಿಯನ್ನು ತಂದರೂ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಕಲವರು ಟ್ರೋಲ್ ಮಾಡಿದ್ದರು. ಮನು ಅವರು ಕೆಲವು ಕಾರ್ಯಕ್ರಮಕ್ಕೆ ಹೋದಾಗ ಅವರು ಗೆದ್ದಿದ್ದ ಪದಕಗಳನ್ನು ಕೊಂಡೊಯ್ಯುತ್ತಿದ್ದರು. ಇದು ಟ್ರೋಲ್ಗೆ ಒಳಗಾಗಿತ್ತು. ಪದಕ ಗೆದ್ದಿರುವ ವಿಚಾರ ದೇಶಕ್ಕೆ ತಿಳಿದಿದೆ ಇದನ್ನು ಪದೇಪದೆ ನೆನಪಿಸಬೇಕಿಲ್ಲ ಎಂದು ಟ್ರೋಲ್ ಮಾಡಿದ್ದರು.
ತಮ್ಮ ವಿರುದ್ಧದ ಟ್ರೋಲ್ಗೆ ಪ್ರತಿಕ್ರಿಯೆ ನೀಡಿದ ಮನು, “ನಾನು ಪದಕವನ್ನು ಕೊಂಡೊಯ್ಯುತ್ತೇನೆ, ನಾನೇಕೆ ಕೊಂಡೊಯ್ಯಬಾರದು. ಕೆಲ ಕಾರ್ಯಕ್ರಮಗಳ ಸಂಘಟಕರು ಪದಕ ತರುವಂತೆ ಹೇಳುತ್ತಾರೆ. ಯಾರಾದರೂ ಪದಕ ನೋಡಲು ಬಯಸಿದರೆ ನಾನು ಪದಕವನ್ನು ತೆಗೆದುಕೊಂಡು ಹೋಗುತ್ತೇನೆ. ಒಂದೊಮ್ಮೆ ಯಾರೂ ಹೇಳದಿದ್ದರೂ ಕೂಡ ಪಕದ ತೆಗೆದುಕೊಂಡು ಹೋಗುವೆ. ಇದು ನಾನು ಗೆದ್ದಿರುವ ಪದಕ ಟ್ರೋಲಿಗರು ಗೆದ್ದಿರುವ ಪದಕವಲ್ಲ ಎಂದು ಟ್ರೋಲಿಗರಿಗೆ ಮುಟ್ಟಿನೋಡುವಂತ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ Manu Bhaker: ನೀರಜ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಮನು ಭಾಕರ್; ಪ್ರೇಮಾಂಕುರ ಖಚಿತ ಎಂದ ನೆಟ್ಟಿಗರು
ಪದಕ ಗೆದ್ದ ಬಳಿಕ ಮನು ಭಾಕರ್ (Manu Bhaker) ಅವರ ಬ್ರಾಂಡ್ ಮೌಲ್ಯ 20 ಲಕ್ಷ ರೂ.ನಿಂದ 1.5 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. 22 ವರ್ಷದ ಮನು ಭಾಕರ್, ಕಳೆದ ಟೋಕಿಯೋ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದರಾದರೂ ಅವರಿಗೆ ಪದಕ ಲಭಿಸಿರಲಿಲ್ಲ. ಆದರೆ ಪ್ಯಾರಿಸ್ ನಲ್ಲಿ ಸಿಕ್ಕಿರುವ ಎರಡು ಪದಕಗಳು ಭಾಕರ್ ಬದುಕನ್ನೇ ಬದಲಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಭಾರತ ತಂಡದ ಸ್ಟಾರ್ ಕ್ರಿಕೆಟಿಗರು ಜಾಹೀರಾತು ಒಪ್ಪಂದಗಳಿಗೆ ವಾರ್ಷಿಕ 3 ರಿಂದ 6 ಕೋಟಿ ರೂ. ಪಡೆಯುತ್ತಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಪಿ,ವಿ ಸಿಂಧು 2022ರಲ್ಲಿ 2.21 ಕೋಟಿ ರೂ. ಮೊತ್ತದ ಒಪ್ಪಂದ ಪಡೆದಿದ್ದೇ ಭಾರತದಲ್ಲಿ ಕ್ರಿಕೆಟಿಗರ ಹೊರತಾಗಿ ಇತರ ಕ್ರೀಡಾಪಟುಗಳು ಪಡೆದ ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಒಲಿಂಪಿಕ್ಸ್ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಸದ್ಯ ಮನು ಪಾಮ್ಯಾಕ್ಸ್ ಆಕ್ಟಿವ್ವೇರ್ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.
ಒಲಿಂಪಿಕ್ಸ್ ಪದಕ ಗೆದ್ದ ಬಳಿಕ ಮೂರು ತಿಂಗಳ ವಿಶ್ರಾಂತಿ ಬಯಸಿರುವ ಮನು ಭಾಕರ್ ತಮ್ಮ ನೆಚ್ಚಿನ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.