Thursday, 19th September 2024

Mariyappan Thangavelu: ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ತಂಗವೇಲು

Mariyappan Thangavelu

ಬೆಂಗಳೂರು: ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್‌ನ ಟಿ63 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಮರಿಯಪ್ಪನ್ ತಂಗವೇಲು(Mariyappan Thangavelu) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸತತವಾಗಿ ಮೂರು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹಿರಿಮೆಗೆ ಪಾತ್ರರಾದರು. ರಿಯೊದಲ್ಲಿ ಚಿನ್ನ, ಟೋಕಿಯೊದಲ್ಲಿ ಬೆಳ್ಳಿ, ಇದೀಗ ಪ್ಯಾರಿಸ್‌ನಲ್ಲಿ ಕಂಚು ಗೆದ್ದರು.

ಭಾರತ ಪರ ಪ್ಯಾರಾಲಿಂಪಿಕ್ಸ್‌ನಲ್ಲಿ 3 ಪದಕ ಗೆದ್ದ 3ನೇ ಕ್ರೀಡಾಪಟು ಎಂಬ  ಹಿರಿಮೆಗೂ ತಂಗವೇಲು ಪಾತ್ರರಾಗಿದ್ದಾರೆ. ಉಳಿದಿಬ್ಬರೆಂದರೆ,  ದೇವೇಂದ್ರ ಝಝಾರಿಯಾ(2ಚಿನ್ನ, 1 ಬೆಳ್ಳಿ) ಮತ್ತು ಅವನಿ ಲೇಖರಾ(2 ಚಿನ್ನ, 1 ಕಂಚು). ಮರಿಯಪ್ಪನ್ ತಂಗವೇಲು ಸಾಧನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಟ್ವಿಟರ್‌ ಎಕ್ಸ್‌ನಲ್ಲಿ ಅಭಿನಂದನೆ ಸಲ್ಲಿದ್ದಾರೆ.

ಬಸ್‌ನ ಚಕ್ರದಡಿ ಸಿಲುಕಿ ಕಾಲು ಕಳೆದುಕೊಂಡ…

ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯವಾಡಗಂಪಟ್ಟಿ ಗ್ರಾಮದಲ್ಲಿ ಜನಿಸಿದ ಮರಿಯಪ್ಪನ್ ತಂಗವೇಲು  ಐದನೇ ವಯಸ್ಸಿನಲ್ಲಿ ಬಸ್‌ನ ಚಕ್ರದಡಿ ಸಿಲುಕಿ ಕಾಲು ಕಳೆದುಕೊಂಡರು. ಈ ವೇಳೆ ಅವರು  ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದರು. ನಂತರ ಅಚ್ಚರಿಯೇ ನಡೆದುಹೋಯಿತು. ಬೆಂಗಳೂರಿನ ಕೋಚ್ ಆರ್‌.ಸತ್ಯನಾರಾಯಣ ಅವರ ಕಣ್ಣಿಗೆ ಬಿದ್ದ ಈ ತಂಗವೇಲು 2015ರಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದರು. ನಗರದ ಸಂಪಂಗಿರಾಮನಗರದಲ್ಲಿ ಅವರ ವಾಸಕ್ಕೂ ವ್ಯವಸ್ಥೆ ಮಾಡಲಾಯಿತು. ಟಿ–42 ವಿಭಾಗದ ಹೈಜಂಪ್‌ನಲ್ಲಿ ಸ್ಪರ್ಧಿಸಿದ್ದ ಅವರು 2016 ರಲ್ಲಿ ರಿಯೋದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಚಿನ್ನ ಗೆದ್ದರು. ಆ ಬಳಿಕ ಟೋಕಿಯೊದಲ್ಲಿ ಟಿ–42 ವಿಭಾಗದ ಬದಲು ಟಿ–63 ವಿಭಾಗದಲ್ಲಿ ಕಣಕ್ಕಿಳಿದು ಬೆಳ್ಳಿ ಗೆದ್ದರು. ಈ ಬಾರಿಯ ಪ್ಯಾರಿಸ್‌ನಲ್ಲಿಯೂ ಟಿ–63 ವಿಭಾಗದಲ್ಲಿಯೇ ಸ್ಪರ್ಧಿಸಿ ಕಂಚು ಗೆದ್ದ ಸಾಧನೆ ಮಾಡಿದರು.

https://x.com/sportwalkmedia/status/1831058570902966468

ಇದನ್ನೂ ಓದಿ Paris Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ 20 ಪದಕ ಬೇಟೆಯಾಡಿದ ಭಾರತ; ಐತಿಹಾಸಿಕ ಸಾಧನೆ

ಪತ್ರಿಕೆ ಹಾಕುತ್ತಿದ್ದ ತಂಗವೇಲು

ಮರಿಯಪ್ಪನ್ ಅವರ ಬಾಲ್ಯ ಅತ್ಯಂತ ಸಂಕಷ್ಟದಿಂದ ತುಂಬಿತ್ತು. ಎರಡರಿಂದ ಮೂರು ಕಿಲೋಮೀಟರ್ ದೂರ ನಡೆದು ಪತ್ರಿಕೆ ಹಂಚಿ ವಾಪಸಾದ ನಂತರ ತಾಯಿ ಜತೆ ಗಾರೆ ಕೆಲಸಕ್ಕೂ ಹೋಗುತ್ತಿದ್ದೆಎಂದು ಹಿಂದೊಮ್ಮೆ ತಂಗವೇಲು ಸಂದರ್ಶನವೊಂದಲ್ಲೊ ಹೇಳಿದ್ದರು. ಮರಿಯಪ್ಪನ್ ತಾಯಿ ತರಕಾರಿ ಮಾರುತ್ತಿದ್ದರು. ವ್ಯಾಪಾರ ಕಡಿಮೆ ಇದ್ದಾಗ ಗಾರೆ ಕೆಲಸಕ್ಕೂ ಹೋಗುತ್ತಿದ್ದರು. ಹಾಗೆ ಹೊರಟು ನಿಂತರೆ ತಾಯಿ ಜತೆ ಮರಿಯಪ್ಪನ್ ಕೂಡ ಹೋಗಿ ಕೆಲಸದಲ್ಲಿ ನೆರವಾಗುತ್ತಿದ್ದರು. ತಂಗವೇಲು ಸಾಧನೆಗೆ ಖೇಲ್ ರತ್ನ ಪ್ರಶಸ್ತಿ ಕೂಡ ಲಭಿಸಿದೆ.