Sunday, 15th December 2024

ಬೆಂಗಳೂರು ತಂಡವನ್ನು ಕೆಡವಿದ ಮುಂಬೈ ಇಂಡಿಯನ್ಸ್

ಅಬುಧಾಬಿ: ಸಾಧಾರಣ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೆಡವಿದ ಮುಂಬೈ ಇಂಡಿಯನ್ಸ್ ಸುಲಭ ವಾಗಿ ಜಯ ಸಾಧಿಸಿತು.

ಬುಧವಾರ ನಡೆದ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಅವರ ಪರಿಣಾಮಕಾರಿ ಬೌಲಿಂಗ್ ಮತ್ತು ಸೂರ್ಯಕುಮಾರ್ ಯಾದವ್ (ಔಟಾಗದೆ 79) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಐದು ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಎದುರಾಳಿಯನ್ನು 164 ರನ್‌ಗಳಿಗೆ ನಿಯಂತ್ರಿಸಿತು. ಗುರಿ ಬೆನ್ನತ್ತಿದ ತಂಡಕ್ಕೆ ಕ್ವಿಂಟನ್ ಡಿ’ಕಾಕ್ ಮತ್ತು ಇಶಾನ್ ಕಿಶನ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಕ್ವಿಂಟನ್ ವಿಕೆಟ್ ಕಬಳಿಸಿ ಈ ಜೊತೆಯಾಟವನ್ನು ಮೊಹಮ್ಮದ್ ಸಿರಾಜ್ ಮುರಿದರು. ಇಶಾನ್ ರನ್ನು ಯಜುವೇಂದ್ರ ಚಾಹಲ್ ಔಟ್ ಮಾಡಿದರು. ಸೌರಭ್ ತಿವಾರಿ ವಿಕೆಟ್ ಕೂಡ ಸಿರಾಜ್ ಪಾಲಾಯಿತು. ನಂತರ ಸೂರ್ಯಕುಮಾರ್‌ಗೆ ಕೃಣಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಸಹಕಾರ ನೀಡಿದರು.

ದೇವದತ್ತ (74) ಮತ್ತು ಜೋಶ್ ಫಿಲಿಪ್ (33) ಮೊದಲ ವಿಕೆಟ್‌ಗೆ 71 ರನ್‌ ಸೇರಿಸಿದರು. ಆದರೆ ಇದರ ಸದುಪಯೋಗ ಪಡೆದು ಕೊಂಡು ದೊಡ್ಡ ಮೊತ್ತ ಗಳಿಸುವ ಬೆಂಗಳೂರಿನ ಆಸೆಗೆ ಜಸ್‌ಪ್ರೀತ್ ಬೂಮ್ರಾ ಅಡ್ಡಿಯಾದರು.

ಇನಿಂಗ್ಸ್‌ನ ಕೊನೆಯ ಐದು ಓವರ್‌ಗಳಲ್ಲಿ ಬೆಂಗಳೂರಿನ ನಾಲ್ಕು ವಿಕೆಟ್‌ಗಳು ಪತನವಾದವು. ಎರಡನ್ನು ಬೂಮ್ರಾ ಕಬಳಿಸಿದರು. ಕೇವಲ 35 ರನ್‌ಗಳು ಮಾತ್ರ ಗಳಿಕೆಯಾದವು. ಆಯರನ್ ಫಿಂಚ್ ಬದಲಿಗೆ ಸ್ಥಾನ ಪಡೆದ ಜೋಶ್ ಫಿಲಿಪ್ ಅವರು ದೇವದತ್ತ ಜೊತೆಗೂಡಿ ಉತ್ತಮವಾಗಿ ಬ್ಯಾಟ್ ಬೀಸಿದರು.

ಸ್ಪಿನ್ನರ್ ರಾಹುಲ್ ಚಾಹರ್ ಎಂಟನೇ ಓವರ್‌ನಲ್ಲಿ ಫಿಲಿಪ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ದೇವದತ್ತ ತಮ್ಮ ಆಟ ವನ್ನು ಮತ್ತಷ್ಟು ಬಿರುಸುಗೊಳಿಸಿ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಟೂರ್ನಿಯಲ್ಲಿ ಇದು ಅವರ ನಾಲ್ಕನೇ ಅರ್ಧಶತಕ.

ವಿರಾಟ್ ಕೊಹ್ಲಿ ಬೂಮ್ರಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಕೊಹ್ಲಿ ಫೀಲ್ಡರ್ ಸೌರಭ್ ತಿವಾರಿಗೆ ಕ್ಯಾಚಿತ್ತರು. ಇದರೊಂದಿಗೆ ಬೂಮ್ರಾ ಐಪಿಎಲ್‌ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. ಕೊನೆಯ ಹಂತದ ಸ್ಪೆಲ್ ಮಾಡಲು ಚೆಂಡು ಪಡೆದ ಬೂಮ್ರಾ 17ನೇ ಓವರ್‌ನಲ್ಲಿ ದೇವದತ್ತ ಮತ್ತು ಶಿವಂ ದುಬೆ ಇಬ್ಬರನ್ನೂ ಪೆವಿಲಿಯನ್‌ಗೆ ಕಳಿಸಿದರು.