ನವದೆಹಲಿ: ಮಾಜಿ ಹೆವಿವೇಟ್ ವಿಶ್ವಚಾಂಪಿಯನ್, ಬಾಕ್ಸಿಂಗ್ ದಂತಕತೆ, 58 ವರ್ಷದ ಮೈಕ್ ಟೈಸನ್(Mike Tyson Vs Jake Paul) ಮತ್ತೆ ಬಾಕ್ಸಿಂಗ್ ಅಖಾಡಕ್ಕೆ ಇಳಿಯಲು ಸಿದ್ಧವಾಗಿದ್ದಾರೆ. ಖ್ಯಾತ ಯೂಟ್ಯೂಬರ್&ಬಾಕ್ಸರ್ ಜೇಕ್ ಪಾಲ್ ವಿರುದ್ಧ ಇಂದು ಸೆಣಸಾಡಲಿದ್ದಾರೆ. ಈ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸುಮಾರು 20 ವರ್ಷಗಳ ಬಳಿಕ ಟೈಸನ್ ಆಡುತ್ತಿರುವ ಮೊದಲ ವೃತ್ತಿಪರ ಪಂದ್ಯ ಇದಾಗಿದ್ದು ಬಾಕ್ಸಿಂಗ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಡಲ್ಲಾಸ್ ಕೌಬಾಯ್ಸ್‌ನ AT&T ಸ್ಟೇಡಿಯಂ ಇಂದು ರಾತ್ರಿ ರೋಚಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಪಂದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರಗೊಳ್ಳಲಿದೆ. ಈಗಾಗಲೇ 28 ಕೋಟಿ ಚಂದಾದಾರರು ಹೆಚ್ಚುವರಿ ಶುಲ್ಕವಿಲ್ಲದೇ ಪಂದ್ಯವನ್ನು ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ. ಪಂದ್ಯಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಜೇಕ್ ಪಾಲ್ ಮತ್ತು ಮೈಕ್ ಟೈಸನ್ ಮುಖಾಮುಖಿಯಾಗಿದ್ದರು. ಈ ವೇಳೆ ಮೈಕ್ ಟೈಸನ್ ಅವರು ಪಾಲ್ ಕೆನ್ನೆಗೆ ಬಾರಿಸಿದ್ದರು. ತಕ್ಷಣ ಇಲ್ಲಿದ್ದ ಸಂಘಟಕರು ಉಭಯ ಬಾಕ್ಸರ್‌ಗಳನ್ನು ತಡೆದು ನಿಲ್ಲಿಸಿದ್ದಾರೆ. ಪಂದ್ಯಕ್ಕೂ ಮುನ್ನವೇ ತೋರಿದ ರೋಷವನ್ನು ನೋಡುವಾಗ ಪಂದ್ಯ ಇನ್ನಷ್ಟು ಪೈಪೋಟಿಯಿಂದ ಕೂಡಿರುವುದು ಖಚಿತ.
10-1 ದಾಖಲೆ ಹೊಂದಿರುವ 27ರ ಹರೆಯದ ಪೌಲ್, ತನಗಿಂತ 30 ವರ್ಷ ಹಿರಿಯ ಎದುರಾಳಿ ವಿರುದ್ಧ ಹೋರಾಡುವ ಕುರಿತೂ ಪ್ರಶ್ನೆಗಳನ್ನು ಎದ್ದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೌಲ್, ಟೈಸನ್ ವಿರುದ್ದದ ಪಂದ್ಯವು ವೃತ್ತಿಪರವಾಗಿರಬೇಕು. ಬಾಕ್ಸಿಂಗ್‌ನ ದಂತಕಥೆಯ ವಿರುದ್ಧ ಹೋರಾಡುವ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಪಾಲ್ ಈ ಹೋರಾಟದಿಂದ ಸುಮಾರು 330 ಕೋಟಿ ರೂ.ಗಳಿಸುವ ನಿರೀಕ್ಷೆಯಿದೆ. ಆದರೆ ಟೈಸನ್ ಹಣಕ್ಕಾಗಿ ಇದನ್ನು ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಟೈಸನ್ ರಿಗೆ ಸುಮಾರು 160 ಕೋಟಿ ರೂ. ಸಿಗಲಿದೆ. ಹಳೆಯ ಟೈಸನ್ ಮ್ಯಾಜಿಕ್ ಮೇಲುಗೈ ಸಾಧಿಸುತ್ತದೆಯೇ ಅಥವಾ ಜೇಕ್ ಪಾಲ್ ಮತ್ತೊಂದು ಗೆಲುವನ್ನು ಸಾಧಿಸಬಹುದೇ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ Happy Birthday Virat Kohli: 36ನೇ ವರ್ಷಕ್ಕೆ ಕಾಲಿಟ್ಟ ಕಿಂಗ್ ಕೊಹ್ಲಿ
ಟೈಸನ್ ಕೊನೆಯದಾಗಿ 2005 ರಲ್ಲಿ ವೃತ್ತಿಪರವಾಗಿ ಬಾಕ್ಸಿಂಗ್ ರಿಂಗ್‌ಗೆ ಇಳಿದಿದ್ದರು. 2020 ರಲ್ಲಿ ರಾಯ್ ಜೋನ್ಸ್ ಜೂನಿಯರ್ ವಿರುದ್ಧದ ಪ್ರದರ್ಶನ ಪಂದ್ಯಕ್ಕಾಗಿ ಮತ್ತೆ ರಿಂಗ್‌ಗೆ ಕಾಲಿಟ್ಟಿದ್ದರು. ಹೊಟ್ಟೆ ಹುಣ್ಣು ಸಮಸ್ಯೆಯ ನಂತರ ಸುಮಾರು 11.7 ಕೆಜಿ ತೂಕ ಕಳೆದುಕೊಂಡ ಅವರು ಮತ್ತೆ ವೃತ್ತಿಪರ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
1987ರಿಂದ 1990ರವರೆಗೆ ಟೈಸನ್ ಅವರು ಹೆವಿವೇಟ್ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದ್ದರು.ಅತಿ ಕಿರಿಯ ವಯಸ್ಸಿನಲ್ಲಿ (20 ವರ್ಷ, ನಾಲ್ಕು ತಿಂಗಳು, 22 ದಿನಗಳು) ಹೆವಿವೇಟ್ ಟ್ರೋಫಿ ಗೆದ್ದ ದಾಖಲೆಯೂ ಅವರ ಹೆಸರಲ್ಲಿದೆ. ಖ್ಯಾತಿಯೊಂದಿಗೆ ಸಾಕಷ್ಟು ವಿವಾದಗಳೂ ಅವರ ಬೆನ್ನಿಗಂಟಿಕೊಂಡಿವೆ. 1992ರಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಟೈಸನ್ ಆರು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದರು. ಮೂರು ವರ್ಷಗಳ ನಂತರ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು. ‘ಭೂಮಿ ಮೇಲಿನ ಅತ್ಯಂತ ಕ್ರೂರ ಮನುಷ್ಯ’ (ದ ಬ್ಯಾಡೆಸ್ಟ್ ಮ್ಯಾನ್ ಆನ್ ದ ಪ್ಲಾನೆಟ್) ಎಂಬ ಹೆಸರಿನ ಕುಖ್ಯಾತಿಯೂ ಅವರಿಗಿದೆ.