Saturday, 23rd November 2024

ಮಿಲ್ಲರ್‌, ಮೋರಿಸ್‌ ಮೆರೆದಾಟ: ಗೆಲುವಿನ ದಡ ಸೇರಿದ ರಾಯಲ್ಸ್

ಮುಂಬೈ: ರಾಜಸ್ತಾನ್ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡುವಲ್ಲಿ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ ಯಶಸ್ವಿಯಾಗಿ ದ್ದಾರೆ.

ಈ ಮೂಲಕ ನಾಯಕ ಸಂಜೂ ಸ್ಯಾಮ್ಸನ್‌’ಗೆ ತನ್ನ ನೈಜ ಆಟ ತೋರಿಸಿದರು. ಈ ಮೂಲಕ ಮೊದಲ ಪಂದ್ಯವನ್ನು ಗೆಲ್ಲಬಹು ದಿತ್ತು ಎಂದು ಸಣ್ಣ ಸುಳಿವನ್ನು ಬಿಟ್ಟುಕೊಟ್ಟರು ಎಂದು ಹೇಳಿದ್ದರೂ ಅಚ್ಚರಿ ಇಲ್ಲ. ಕಳೆದ ಪಂದ್ಯದಲ್ಲಿ ನಾಯಕ ಸಂಜೂ ಒಂದು ರನ್‌ ತೆಗೆಯಲು ನಿರಾಕರಿಸಿದ್ದು, ಪಂದ್ಯದ ಬಳಿಕ ಸಾಕಷ್ಟು ಟೀಕೆಗೆ ಒಳಗಾಗಿತ್ತು.

ಬೌಲರ್‌ಗಳ ಅಬ್ಬರಕ್ಕೆ ಸಾಕ್ಷಿಯಾದ ಸಮರದಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಡೇವಿಡ್ ಮಿಲ್ಲರ್ (62ರನ್)ಹಾಗೂ ಕ್ರಿಸ್ ಮಾರಿಸ್ (36*ರನ್) ಜೋಡಿ ಬಿರುಸಿನ ಬ್ಯಾಟಿಂಗ್ ಫಲವಾಗಿ ರಾಜಸ್ಥಾನ ರಾಯಲ್ಸ್ ತಂಡ ಗೆಲುವಿನ ಹಳಿಗೇರಿತು. ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಳಗ 3 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು.

ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 4 ರನ್‌ಗಳಿಂದ ವೀರೋಚಿತ ಸೋಲು ಕಂಡಿದ್ದ ರಾಯಲ್ಸ್ ಆರಂಭಿಕ ಕುಸಿತದ ನಡುವೆಯೂ ಕಡೇ ಹಂತದಲ್ಲಿ ಕ್ರಿಸ್ ಮಾರಿಸ್ ಹೋರಾಟದ ಫಲವಾಗಿ ಗೆಲುವಿನ ದಡ ಸೇರಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ರಿಷಭ್ ಪಂತ್ (51ರನ್) ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 147 ರನ್‌ಪೇರಿಸಿದರೆ, ಪ್ರತಿಯಾಗಿ ರಾಜಸ್ಥಾನ ರಾಯಲ್ಸ್ ತಂಡ 19.4 ಓವರ್‌ಗಳಲ್ಲಿ 7 ವಿಕೆಟ್‌ಗೆ 150 ರನ್‌ಗಳಿಸಿ ಜಯದ ನಗೆ ಬೀರಿತು.