ನವದೆಹಲಿ: ಮುಂಬರುವ ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಮುಂಬೈ ತಂಡದಿಂದ ಯುವ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ (Prithvi Shaw) ಅವರನ್ನು ಕೈ ಬಿಡಲು ಕಾರಣವೇನೆಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಆ ಮೂಲಕ ಕಳೆದ ಕೆಲ ದಿನಗಳ ಹಿಂದೆ ಪೃಥ್ವಿ ಶಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ವ್ಯಕ್ತಪಡಿಸಿದ್ದ ಅಸಮಾಧಾನಕ್ಕೆ ಇದೀಗ ಮುಂಬೈ ಕ್ರಿಕೆಟ್ ಸಂಸ್ಥೆ ತಿರುಗೇಟು ನೀಡಿದೆ.
ಈ ಹಿಂದೆ ರಣಜಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಪೃಥ್ವಿ ಶಾ ಅವರನ್ನು ಇತ್ತೀಚೆಗೆ ಮುಷ್ತಾಯವಾಗಿದ್ದ ಸೈಯದ್ ಮುಷ್ತಾಕ್ ಟಲಿ ಟ್ರೋಫಿ ಟೂರ್ನಿಯಲ್ಲಿ ಆಡಿಸಲಾಗಿತ್ತು. ಆದರೆ, ಅವರು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಅದರಂತೆ ಇತ್ತೀಚೆಗೆ ವಿಜಯ್ ಹಝಾರೆ ಟ್ರೋಫಿ ಟೂರ್ನಿಗೆ ಮುಂಬೈ ತಂಡವನ್ನು ಪ್ರಕಟಿಸಲಾಗಿತ್ತು ಹಾಗೂ ಪೃಥ್ವಿನ ಶಾ ಅವರನ್ನು ಕೈ ಬಿಡಲಾಗಿತ್ತು. ಈ ವೇಳೆ ತಮ್ಮ ಸ್ಟೋರಿಯಲ್ಲಿ ಪೃಥ್ವಿ ಶಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
Next challenge awaits! 🏏
— Mumbai Cricket Association (MCA) (@MumbaiCricAssoc) December 17, 2024
Under Shreyas Iyer's leadership, our powerhouse squad is ready for the Vijay Hazare Trophy! 💪#MCA #Mumbai #Cricket #Wankhede #BCCI pic.twitter.com/BMhPhTSl18
ಪೃಥ್ವಿ ಶಾಗೆ ಶಿಸ್ತು, ಫಿಟ್ನೆಸ್ ಕೊರತೆ ಇದೆ
ಇದೀಗ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಮಾತನಾಡಿ ಪೃಥ್ವಿ ಶಾರನ್ನು ಕೈ ಬಿಡಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. “ಸೈಯದ್ ಮುಷ್ತಾಕ್ ಟಲಿ ಟ್ರೋಫಿ ಟೂರ್ನಿಯಲ್ಲಿ ಪೃಥ್ವಿ ಶಾ ಅವರನ್ನು ಮರೆ ಮಾಚಲು ನಾವು 10 ಮಂದಿ ಆಟಗಾರರಿಂದ ಫೀಲ್ಡಿಂಗ್ ಮಾಡಿಸಿದ್ದೆವು. ಅವರ ಬಳಿ ಚೆಂಡು ಬಂದರೂ ಅದನ್ನು ಪಡೆಯಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ,” ಎಂದು ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಬ್ಯಾಟಿಂಗ್ ವೇಳೆಯೂ ಅವರು ಚೆಂಡಿನ ಬಳಿ ಹೋಗಲು ಹೇಗೆ ಕಷ್ಟಪಡುತ್ತಿದ್ದರು ಎಂಬುದನ್ನು ನೀವು ನೋಡಬಹುದು. ಅವರ ಫಿಟ್ನೆಸ್, ಶಿಸ್ತು ಹಾಗೂ ವರ್ತನೆ ಅತ್ಯಂತ ಕಳಪೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಭಿನ್ನ ಆಟಗಾರರಿಗೆ ವಿಭಿನ್ನ ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲ. ನಿಯಮ ಎಂದ ಮೇಲೆ ಎಲ್ಲರಿಗೂ ಒಂದೇ ರೀತಿ ಇರುತ್ತದೆ,” ಎಂದು ಎಂಸಿಎ ಅಧಿಕಾರಿ ಹೇಳಿದ್ದಾರೆ.
ಪೃಥ್ವಿ ಶಾರ ಸೋಶಿಯಲ್ ಮೀಡಿಯಾ ಪೋಸ್ಟ್ ನಮ್ಮ ಮೇಲೆ ಪರಿಣಾಮ ಬೀರಲ್ಲ
“ತಂಡದಲ್ಲಿನ ಹಿರಿಯ ಆಟಗಾರರು ಕೂಡ ಅವರ ವರ್ತನೆ ಬಗ್ಗೆ ನಮಗೆ ದೂರು ನೀಡಲು ಆರಂಭಿಸಿದ್ದಾರೆ. ಪೃಥ್ವಿ ಶಾರ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಂದ ಎಂಸಿಎ ಮತ್ತು ಸೆಲೆಕ್ಟರ್ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,” ಎಂದು ಅವರು ಯುವ ಆಟಗಾರನಿಗೆ ತಿರುಗೇಟು ನೀಡಿದ್ದಾರೆ.
ಪೃಥ್ವಿ ಶಾ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದಿದು
ಈ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ್ದ ಮುಂಬೈ ನಾಯಕ ಶ್ರೇಯಸ್ ಅಯ್ಯರ್, ಪೃಥ್ವಿ ಶಾ ಅವರ ಅಶಿಸ್ತಿನ ಬಗ್ಗೆ ಟೀಕಿಸಿದ್ದರು. “ಅವರು ತಮ್ಮ ಕೆಲಸದ ನೀತಿಯಲ್ಲಿ ಸರಿಯಾಗಿ ಪಾಲಿಸಬೇಕಾಗಿದೆ. ಇದನ್ನು ಅವರು ಪಾಲಿಸಿದ್ದೇ ಆದಲ್ಲಿ ಅವರಿಗೆ ಆಕಾಶವೇ ಮಿತಿಯಾಗುತ್ತದೆ,” ಎಂದು ಹೇಳಿದ್ದರು.
ಈ ಸುದ್ದಿಯನ್ನು ಓದಿ: Prithvi Shaw: ‘ನಾನೇನು ತಪ್ಪು ಮಾಡಿದೆ?’; ಟ್ರೋಲ್ ಬಗ್ಗೆ ಬೇಸರ ವ್ಯಕ್ತಪಡಿಸಿದ ಪೃಥ್ವಿ ಶಾ