Monday, 25th November 2024

Mohammad Nabi: ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ ಮೊಹಮ್ಮದ್‌ ನಬಿ

ಕಾಬುಲ್‌: ಅಫ್ಘಾನಿಸ್ಥಾನದ ಸವ್ಯಸಾಚಿ ಕ್ರಿಕೆಟಿಗ ಮೊಹಮ್ಮದ್‌ ನಬಿ(Mohammad Nabi) ಅವರು ಏಕದಿನ ಕ್ರಿಕೆಟ್‌ಗೆ ನಿವೃತ್ತಿಯ ಘೋಷಿಸಲು(Mohammad Nabi retire from ODI) ನಿರ್ಧರಿಸಿದ್ದಾರೆ. ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ(Champions Trophy) ನಬಿಗೆ ಕೊನೆಯ ಸರಣಿಯಾಗಿದೆ.

ನಬಿ ಏಕದಿನ ಕ್ರಿಕೆಟ್‌ ನಿವೃತ್ತಿ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್‌ ಬೋರ್ಡ್‌ (ACB) ಮುಖ್ಯ ಕಾರ್ಯನಿರ್ವಾಹಕ ನಸೀಬ್‌ ಖಾನ್‌ ಖಚಿತಪಡಿಸಿದ್ದಾರೆ. ಕ್ರಿಕ್‌ ಬಜ್‌ ಜತೆ ಮಾತನಾಡಿದ ನಸೀಬ್‌ ಖಾನ್‌, ಹಿರಿಯ ಆಟಗಾರ ನಬಿ ಚಾಂಪಿಯನ್ಸ್‌ ಟ್ರೋಫಿ ಬಳಿಕ ವಿದಾಯ ಹೇಳಲಿದ್ದಾರೆ. ಈಗಾಗಲೇ ನಬಿ ಈ ವಿಚಾರವನ್ನು ಬೋರ್ಡ್‌ಗೆ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ. ನವಿ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದರೂ ಟಿ20 ಕ್ರಿಕೆಟ್‌ನಲ್ಲಿ ಕೆಲ ಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದರು. ನಬಿ ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

39 ವರ್ಷದ ಮೊಹಮ್ಮದ್‌ ನಬಿ ಪ್ರಸ್ತುತ ಏಕದಿನದ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ನಂ.1 ಆಲ್‌ರೌಂಡರ್‌ ಸ್ಥಾನ ಅಲಂಕರಿಸಿದ್ದಾರೆ (306 ಅಂಕ). ನಂ.1 ಸ್ಥಾನ ಅಲಂಕರಿಸಿದ ವಿಶ್ವದ ಅತೀ ಹಿರಿಯ ಕ್ರಿಕೆಟಿಗ ಎಂಬ ಹಿರಿಮೆಯೂ ಇವರದ್ದಾಗಿದೆ. ಅಫ್ಘಾನಿಸ್ಥಾನ ಕ್ರಿಕೆಟ್‌ ಬೆಳವಣಿಗೆಯಲ್ಲಿ ಮೊಹಮ್ಮದ್‌ ನಬಿ ಪಾತ್ರ ಕೂಡ ಅಪಾರ ಪ್ರಮಾಣದಲ್ಲಿತ್ತು. ಇಂದು ಆಸ್ಟ್ರೇಲಿಯಾ, ಇಂಗ್ಲೆಂಡ್‌ ತಂಡವನ್ನು ಮಣಿಸುವಷ್ಟರ ಮಟ್ಟಿಗೆ ತಂಡ ಬೆಳೆಯುವಲ್ಲಿ ನಬಿ ಕೊಡುಗೆಯೂ ಇದೆ. ತಂಡದ ನಾಯಕನಾಗಿಯೂ ಹಲವು ಸ್ಮರಣೀಯ ಗೆಲುವು ಕಂಡಿದ್ದಾರೆ.

ಇದನ್ನೂ ಓದಿ Rohit Sharma: ಕಡಿಮೆ ಬೆಲೆಗೆ ರಿಟೇನ್‌; ರೋಹಿತ್‌ ಹೇಳಿದ್ದೇನು?

ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ

ಮೊಹಮ್ಮದ್‌ ನಬಿ ಅವರು 2009ರಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಪಂದ್ಯವನ್ನಾಡುವ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ನಬಿ 58 ರನ್‌ ಬಾರಿಸಿದ್ದರು. ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಒಟ್ಟು 165 ಏಕದಿನ ಪಂದ್ಯವನ್ನಾಡಿರುವ ನಬಿ 3549 ರನ್‌ ಬಾರಿಸಿದ್ದಾರೆ. ಈ ವೇಳೆ 2 ಶತಕ ಮತ್ತು 17 ಅರ್ಧಶತಕ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ 171 ವಿಕೆಟ್‌ ಕಡೆವಿದ್ದಾರೆ. 17 ರನ್‌ಗೆ 5 ವಿಕೆಟ್‌ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ

ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸದ ಕಾರಣದಿಂದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ ಕೂಟವನ್ನು ಹೈಬ್ರೀಡ್‌ ಮಾದರಿಯಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(Pakistan Cricket Board) ಸಮ್ಮತಿ ಸೂಚಿಸಿದೆ ಎನ್ನಲಾಗಿದೆ. ಭಾರತ ತನ್ನ ಪಂದ್ಯಗಳನ್ನು ಶಾರ್ಜಾ ಅಥವಾ ದುಬೈನಲ್ಲಿ ಆಡುವ ಸಾಧ್ಯತೆ ಇದೆ. ನವೆಂಬರ್‌ 11 ಅಥವಾ 12ರಂದು ಐಸಿಸಿ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎನ್ನಲಾಗಿದೆ.