ಕೋಲ್ಕತ್ತಾ: ಮುಂಬರುವ ಟೆಸ್ಟ್ ಕ್ಯಾಲೆಂಡರ್‌ಗೆ ಮುಂಚಿತವಾಗಿ ಯಾವುದೇ ಸರಣಿಯನ್ನು ಆಡಲು ಬಯಸುವುದಿಲ್ಲ ಎಂದು ಟೀಮ್ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ(Mohammed Shami) ಬಹಿರಂಗಪಡಿಸಿದ್ದಾರೆ. ಈ ಮೂಲಕ ಅವರು ಭಾರತ ತಂಡಕ್ಕೆ ಮರಳುವುದು(mohammed shami comeback) ಇನ್ನಷ್ಟು ತಡವಾಗಲಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಶಮಿ 2023 ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿ ಬಳಿಕ ಪಾದದ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ಅವರು ಯಾವುದೇ ಸರಣಿ ಆಡಿಲ್ಲ.
ಮೊಹಮ್ಮದ್ ಶಮಿ ಅವರಿಗೆ ಶನಿವಾರ ಬಂಗಾಳದ ಕ್ರಿಕೆಟ್ ಸಂಸ್ಥೆಯು ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಸನ್ಮಾನ ಮಾಡಿತ್ತು. ಈ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ತಯಾರಿ ನಡೆಸುತ್ತಿದ್ದೇನೆ. ಆದರೆ ತಂಡ ಸೇರುವುದು ತಡವಾಗಲಿದೆ ಎಂದು ಹೇಳಿದರು.
“ನಾನು ಸ್ವಲ್ಪ ಸಮಯದಿಂದ ಕ್ರಿಕೆಟ್‌ನಿಂದ ಹೊರಗುಳಿದಿದ್ದೇನೆ ಎಂದು ನನಗೆ ತಿಳಿದಿದೆ. ನಾನು ತಂಡಕ್ಕೆ ಪುನರಾಗಮನ ಮಾಡಲು ಯಾವುದೇ ನಿರ್ದಿಷ್ಟ ಸರಣಿಯನ್ನು ಗುರಿಯಾಗಿಸಿಕೊಂಡಿಲ್ಲ. ಸದ್ಯ ನಾನು ಫಿಟ್ ಆಗಿಲ್ಲ. ಫಿಟ್‌ನೆಸ್‌ಗಾಗಿ ಕೆಲಸ ಮಾಡಬೇಕಾಗಿದೆ. ಶೇ. 100ರಷ್ಟು ಫಿಟ್ ಆಗುವವರೆಗೆ ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ” ಎಂದು ಹೇಳಿದರು.
ಇದನ್ನೂ ಓದಿ Diamond League Final: ಕೇವಲ 1 ಸೆಂಟಿ ಮೀಟರ್ ಅಂತರದಲ್ಲಿ ಅಗ್ರಸ್ಥಾನ ಕಳೆದುಕೊಂಡ ನೀರಜ್ ಚೋಪ್ರಾ
“ನಾನು ಎಷ್ಟು ಬಲಶಾಲಿಯಾಗಿ ಹಿಂದಿರುಗುತ್ತೇನೋ, ಅದು ನನಗೆ ಉತ್ತಮವಾಗಿದೆ. ನ್ಯೂಜಿಲ್ಯಾಂಡ್ ಅಥವಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿರಲಿ, ಮತ್ತೆ ಗಾಯಗೊಳ್ಳುವ ಅಪಾಯವನ್ನು ಎದುರಿಸಲು ನಾನು ಬಯಸುವುದಿಲ್ಲ. ನಾನು ಈಗಾಗಲೇ ಬೌಲಿಂಗ್ ಪ್ರಾರಂಭಿಸಿದ್ದೇನೆ. ಆದರೆ ನಾನು ದುಡುಕಿನ ನಿರ್ಧಾರ ತೆಗೆದುಕೊಂಡು ತಂಡ ಸೇರಲು ಬಯಸುವುದಿಲ್ಲ” ಎಂದು ಹೇಳುವ ಮೂಲಕ ತಂಡ ಸೇರುವುದು ಇನ್ನಷ್ಟು ತಡವಾಗಲಿದೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ. ಸದ್ಯ ಶಮಿ ಬೆಂಗಳೂರಿನ ಎನ್ಸಿಯಲ್ಲಿ ಪುನಶ್ಚೇತನ ಮತ್ತು ಫಿಟ್‌ನೆಸ್ ಆರೈಕೆಯಲ್ಲಿದ್ದಾರೆ.
ವರದಿಗಳ ಪ್ರಕಾರ ಶಮಿ ಆಸೀಸ್ ವಿರುದ್ಧ ಈ ವರ್ಷದ ಕೊನೆಯಲ್ಲಿ ನಡೆಯುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಶಮಿ ಹೇಳಿಕೆ ನೋಡುವಾಗ ಅವರು ಆಡುವುದು ಅನುಮಾನ ಎನ್ನುವಂತಿದೆ. ಶಮಿ ಆಸ್ಟ್ರೇಲಿಯಾದಲ್ಲಿ ಉತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದಾರೆ, ಎಂಟು ಪಂದ್ಯಗಳಲ್ಲಿ 32.16 ಸರಾಸರಿಯಲ್ಲಿ 6/56 ರ ಅತ್ಯುತ್ತಮ ಅಂಕಿ ಅಂಶಗಳೊಂದಿಗೆ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಐದು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.