Friday, 27th December 2024

MS Dhoni: ಸಾಂತಾ ಕ್ಲಾಸ್‌ ವೇಷ ಧರಿಸಿ ಮಗಳಿಗೆ ಸರ್ಪ್ರೈಸ್ ಕೊಟ್ಟ ಧೋನಿ

ರಾಂಚಿ: ಟೀಮ್‌ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ(MS Dhoni) ಅವರು ತಮ್ಮ ಪರಿವಾರದೊಂದಿಗೆ ಕ್ರಿಸ್‌ಮಸ್‌ ಆಚರಿಸಿದ್ದಾರೆ. ಸಾಂತಾ ಕ್ಲಾಸ್‌ ವೇಷ(MS Dhoni Santa Claus) ಧರಿಸುತ್ತಿರುವ ಧೋನಿಯ ಫೋಟೊ ವೈರಲ್‌ ಆಗಿದೆ. ಈ ಫೋಟೊವನ್ನು ಧೋನಿ ಪತ್ನಿ ಸಾಕ್ಷಿ ಸಿಂಗ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಕೆಟ್​​ನಿಂದ ನಿವೃತ್ತಿ ಪಡೆದ ಬಳಿಕ ಬಹುತೇಕ ಸಮಯವನ್ನು ಎಂ.ಎಸ್ ಧೋನಿ ತಮ್ಮ ಕುಟುಂಬದ ಜತೆ ಕಳೆಯುತ್ತಿದ್ದಾರೆ. ಕಳೆದ ಬಾರಿ ಕುಟುಂಬ ಮತ್ತು ಗೆಳೆಯರೊಂದಿಗೆ ದುಬೈನಲ್ಲಿ ಧೋನಿ ಕ್ರಿಸ್‌ಮಸ್‌ ಆಚರಿಸಿದ್ದರು. ಈ ಬಾರಿ ತಮ್ಮ ಮನೆಯಲ್ಲೇ ಆಚರಿಸಿದ್ದಾರೆ. ಬಾಲಿವುಡ್‌ ನಟಿ ಕೃತಿ ಸನೂನ್‌ ಸೇರಿ ಹಲವು ಭಾಗಿಯಾಗಿದ್ದರು.

ಇತ್ತೀಗೆಗಷ್ಟೇ ಧೋನಿ ಅವರು ತಮ್ಮ ಪತ್ನಿ ಸಾಕ್ಷಿ ಸಿಂಗ್‌(Sakshi Dhoni) ಜತೆ ಉತ್ತಾರಖಂಡ್‌ನ ಸಾಂಪ್ರದಾಯಿಕ ಪಹಾಡಿ ಗರ್ವಾಲಿ ನೃತ್ಯ ಮಾಡಿರುವ ವಿಡಿಯೊವೊಂದು ವೈರಲ್‌ ಆಗಿತ್ತು. ಸಾಮಾನ್ಯವಾಗಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ಆದರೆ, ಧೋನಿ ಪ್ರವಾಸದ ಫೋಟೊಗಳನ್ನು ಅವರ ಮಗಳು ಮತ್ತು ಪತ್ನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ MS Dhoni: ʻಎಂ ಎಸ್‌ ಧೋನಿ ಬಳಿ ಮಾತನಾಡಲ್ಲʼ-ಶಾಕಿಂಗ್‌ ಹೇಳಿಕೆ ನೀಡಿದ ಹರ್ಭಜನ್‌ ಸಿಂಗ್‌!

ಧೋನಿ ಅವರನ್ನು ಈ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಅನ್‌ಕ್ಯಾಪ್ಟ್‌ ನಿಯಮದ ಅಡಿಯಲ್ಲಿ 4 ಕೋಟಿ ರೂ. ನೀಡಿ ತಂಡಕ್ಕೆ ರಿಟೇನ್‌ ಮಾಡಿತ್ತು. ಧೋನಿ ಈ ಬಾರಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಲಿದ್ದಾರೆ ಎನ್ನಲಾಗಿದೆ. ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ನ್ಯೂಜಿಲ್ಯಾಂಡ್‌ನ ಡೆವೊನ್​ ಕಾನ್ವೇ ನಿರ್ವಹಿಸಬಹುದು.

ವಿವಾದದಲ್ಲಿ ಸಿಲುಕಿದ ಧೋನಿ

ಧೋನಿ(MS Dhoni) ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ರಾಂಚಿಯಲ್ಲಿರುವ ನಿವಾಸವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡ ಆರೋಪದ ಮೇಲೆ ಜಾರ್ಖಂಡ್ ರಾಜ್ಯ ಹೌಸಿಂಗ್ ಬೋರ್ಡ್ ಕ್ರಮ ಕೈಗೊಂಡಿದೆ. ಮಹೇಂದ್ರ ಸಿಂಗ್ ಧೋನಿ ಅವರ ಸಾಧನೆಯನ್ನು ಪರಿಗಣಿಸಿ ಜಾರ್ಖಂಡ್ ಸರ್ಕಾರ ಈ ಹಿಂದೆ ಅವರಿಗೆ ರಾಂಚಿಯಲ್ಲಿ 10 ಸಾವಿರ ಚದರ ಅಡಿ ಜಾಗ ನೀಡಿತ್ತು. ಈ ಜಾಗದಲ್ಲಿ ಧೋನಿ ಮನೆ ನಿರ್ಮಿಸಿದ್ದರು. ಆದರೆ ಧೋನಿ ತಮ್ಮ ಮನೆಯಲ್ಲಿ ಡಯಾಗ್ನೋಸ್ಟಿಕ್ ಸೆಂಟರ್ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ ಹೌಸಿಂಗ್ ಬೋರ್ಡ್​ಗೆ ದೂರು ದಾಖಲಿಸಲಾಗಿದೆ.

ಮಂಡಳಿಯ ಪ್ರಕಾರ, ವಸತಿ ಭೂಮಿಯನ್ನು ವಸತಿ ರಹಿತ ಉದ್ದೇಶಗಳಿಗಾಗಿ ಬಳಸುವುದು ನಿಯಮ ಉಲ್ಲಂಘನೆಯಾಗಿದೆ. ಇದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ ಎಂದು ಮಂಡಳಿಯ ಅಧ್ಯಕ್ಷ ಸಂಜಯ್ ಲಾಲ್ ಪಾಸ್ವಾನ್ ಹೇಳಿದ್ದಾರೆ.

ಆರೋಪ ಕೇಳಿ ಬಂದ ಬೆನ್ನಲ್ಲೇ ಮಂಡಳಿಯು ಮೂಲತಃ ಯಾವ ಉದ್ದೇಶಕ್ಕೆ ಧೋನಿಗೆ ನಿವೇಶನ ಮಂಜೂರು ಮಾಡಲಾಗಿದೆ ಮತ್ತು ನಿಯಮಾನುಸಾರ ಬಳಸಲಾಗುತ್ತಿದೆಯೇ ಎಂಬ ಬಗ್ಗೆ ತನಿಖೆಗೆ ಆದೇಶಿಸಿದೆ. ವಸತಿ ಭೂಮಿಯನ್ನು ವಾಣಿಜ್ಯವಾಗಿ ಬಳಸುತ್ತಿರುವುದು ದೃಢಪಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.