Saturday, 23rd November 2024

ಮುಂಬೈ ಇಂಡಿಯನ್ಸ್ ಪ್ಲೇಆಫ್ ಆಸೆ ಜೀವಂತ

ಅಬುಧಾಬಿ: ಪ್ಲೇಆಫ್ ಹಂತಕ್ಕೇರುವ ಅವಕಾಶ ಮಿಸ್ ಆಗುವ ಅಪಾಯದಲ್ಲಿದ್ದ ಮುಂಬೈ ಇಂಡಿಯನ್ಸ್’ಗೆ ಮಂಗಳವಾರ ರಿಲೀಫ್ ಸಿಕ್ಕಿದೆ.

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಯುಎಇ ಆವೃತ್ತಿಯಲ್ಲಿ ಮೊದಲ ಗೆಲುವಿನ ಸಂಭ್ರಮ ಆಚರಿಸಿದೆ. ಹ್ಯಾಟ್ರಿಕ್‌ ಸೋಲಿನಿಂದ ತೀವ್ರ ಹತಾಶೆಯಲ್ಲಿದ್ದ ರೋಹಿತ್‌ ಪಡೆ ಪಂಜಾಬ್‌ ಕಿಂಗ್ಸ್‌ಗೆ 6 ವಿಕೆಟ್‌ ಸೋಲುಣಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 6 ವಿಕೆಟಿಗೆ 135 ರನ್ನುಗಳ ಸಾಮಾನ್ಯ ಸ್ಕೋರ್‌ ದಾಖಲಿಸಿದರೆ, ಮುಂಬೈ 19 ಓವರ್‌ಗಳಲ್ಲಿ 4 ವಿಕೆಟಿಗೆ 137 ರನ್‌ ಮಾಡಿತು.

37 ಎಸೆತಗಳಿಂದ 45 ರನ್‌ ಬಾರಿಸಿದ ಸೌರಭ್‌ ತಿವಾರಿ ಮುಂಬೈ ಓಟವನ್ನು ಚುರುಕುಗೊಳಿಸಿ ದರು. ಬಳಿಕ ಹಾರ್ದಿಕ್‌ ಪಾಂಡ್ಯ ಮತ್ತು ಕೈರನ್‌ ಪೊಲಾರ್ಡ್‌ ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತರು. ಪಾಂಡ್ಯ ಅಜೇಯ 40 ರನ್‌ (30 ಎಸೆತ) ಪೊಲಾರ್ಡ್‌ 7 ಎಸೆತಗಳಿಂದ ಔಟಾಗದೆ 15 ರನ್‌ ಬಾರಿಸಿದರು (1 ಬೌಂಡರಿ, 1 ಸಿಕ್ಸರ್‌). ಶಮಿ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಪಾಂಡ್ಯ ಮುಂಬೈ ಗೆಲುವನ್ನು ಘೋಷಿಸಿದರು.

ಪಂದ್ಯದಿಂದ ಪಂಜಾಬ್‌ ಮಾಯಾಂಕ್‌ ಅಗರ್ವಾಲ್‌ ಅವರನ್ನು ಹೊರಗಿರಿಸಲಾಗಿತ್ತು. ಇವರ ಬದಲು ಮನ್‌ದೀಪ್‌ ಸಿಂಗ್‌ ಇನ್ನಿಂಗ್ಸ್‌ ಆರಂಭಿಸಿದರು. ರಾಹುಲ್‌ (21) ಮತ್ತು ಮನ್‌ದೀಪ್‌ (15) ಸಿಡಿಯುವ ಸೂಚನೆ ನೀಡುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಯುನಿವರ್ಸ್‌ ಬಾಸ್‌ ಗೇಲ್‌ ಠುಸ್‌ ಆದರು. ರಾಹುಲ್‌ ಮತ್ತು ಗೇಲ್‌ ಅವರನ್ನು ಕೈರನ್‌ ಪೊಲಾರ್ಡ್‌ ಒಂದೇ ಓವರ್‌ನಲ್ಲಿ ಉರುಳಿಸಿ ಪಂಜಾಬ್‌ಗ ಬಲವಾದ ಆಘಾತವಿಕ್ಕಿದರು.

8ನೇ ಓವರ್‌ ವೇಳೆ 48 ರನ್ನಿಗೆ 4 ವಿಕೆಟ್‌ ಬಿತ್ತು. ಪಂಜಾಬ್‌ನ ಕೊನೆಯ ನಂಬುಗೆಯ ಬ್ಯಾಟಿಂಗ್‌ ಜೋಡಿಯಾದ ಐಡನ್‌ ಮಾರ್ಕ್‌ರಮ್‌ ಮತ್ತು ದೀಪಕ್‌ ಹೂಡಾ 5ನೇ ವಿಕೆಟಿಗೆ ಜತೆಗೂಡಿದ ಬಳಿಕ ಸ್ಕೋರ್‌ಬೋರ್ಡ್‌ ನಿಧಾನವಾಗಿ ಬೆಳೆಯತೊಡಗಿತು. ತಂಡಕ್ಕೆ ಮತ್ತೆ ಹಾನಿಯಾಗದಂತೆ ನೋಡಿ ಕೊಂಡು ಮೊತ್ತವನ್ನು ನೂರರ ಗಡಿ ದಾಟಿಸಿದರು.

ಮಾರ್ಕ್‌ರಮ್‌-ಹೂಡಾ ಅವರಿಂದ 47 ಎಸೆತಗಳಿಂದ 61 ರನ್‌ ಒಟ್ಟುಗೂಡಿತು. 16ನೇ ಓವರ್‌ ಎಸೆಯಲು ಬಂದ ರಾಹುಲ್‌ ಚಹರ್‌ ಈ ಜೋಡಿಯನ್ನು ಬೇರ್ಪಡಿಸಿದರು. 29 ಎಸೆತಗಳಿಂದ 42 ರನ್‌ (6 ಬೌಂಡರಿ) ಮಾಡಿದ ಮಾರ್ಕ್‌ರಮ್‌ ಬೌಲ್ಡ್‌ ಆದರು. ಜಸ್‌ಪ್ರೀತ್‌ ಬುಮ್ರಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ದೀಪಕ್‌ ಹೂಡಾ (26) ಕೈರನ್‌ ಪೊಲಾರ್ಡ್‌ಗೆ ಕ್ಯಾಚ್‌ ನೀಡಿ ವಾಪಸಾದರು.

ಸ್ಕೋರ್‌ ಪಟ್ಟಿ
ಪಂಜಾಬ್‌ ಕಿಂಗ್ಸ್‌ 
6 ವಿಕೆಟಿಗೆ 135

ಮುಂಬೈ ಇಂಡಿಯನ್ಸ್‌
19 ಓವರ್‌ಗಳಲ್ಲಿ 4 ವಿಕೆಟಿಗೆ 137