ಅಬುಧಾಬಿ: ಬಾಂಗ್ಲಾದೇಶದಲ್ಲಿ ಸಂಭವಿಸುತ್ತಿರುವ ಕೋಮುಗಲಭೆ ಘಟನೆಗಳಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫ್ ಮೊರ್ತಾಜಾ ಅತೀವ ಸಂಕಟ ವ್ಯಕ್ತಪಡಿಸಿದ್ದಾರೆ.
ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ಮೊನ್ನೆ ತನ್ನ ಮೊದಲ ಪಂದ್ಯವನ್ನು ಸ್ಕಾಟ್ಲೆಂಡ್ ಎದುರು ಸೋಲನುಭಿಸಿತು. ತಮ್ಮ ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆ ಹಿಂಸಾಚಾರ ಘಟನೆಗಳನ್ನ ಖಂಡಿಸಿದ್ದಾರೆ. ಹಿಂಸಾಚಾರ ಘಟನೆಯ ಚಿತ್ರವೊಂದನ್ನೂ ಅವರು ತಮ್ಮ ಪೋಸ್ಟ್ನಲ್ಲಿ ಹಾಕಿ ಮರುಗಿದ್ಧಾರೆ.
ನಾನು ಎರಡು ಸೋಲುಗಳನ್ನ ಕಂಡೆ. ಒಂದು ಸೋಲು ಬಾಂಗ್ಲಾದೇಶ ಕ್ರಿಕೆಟ್ ತಂಡದ್ದು. ಮತ್ತೊಂದು ಸಾಲು, ಇಡೀ ಬಾಂಗ್ಲಾದೇಶದ್ದು. ಅದೆಷ್ಟೋ ಕನಸುಗಳು ಹಾಗೂ ಜೀವಗಳು ಕ್ಷಣಮಾತ್ರದಲ್ಲಿ ಕಳೆದುಹೋಗಿವೆ. ಅಲ್ಲಾಹು ನಮಗೆ ದಾರಿ ತೋರಿಸಿ ಕರುಣಿಸಲಿ” ಎಂದು ಬಂಗಾಳಿ ಭಾಷೆಯಲ್ಲಿ ತಮ್ಮ ಹತಾಶೆಯನ್ನ ಹೊರಹಾಕಿದ್ದಾರೆ.
ಬಾಂಗ್ಲಾದೇಶದ ಹಲವೆಡೆ ಕಳೆದ ಒಂದು ವಾರದಿಂದ ಕೋಮುಗಲಭೆ ತೀವ್ರ ಮಟ್ಟದಲ್ಲಿ ನಡೆಯುತ್ತಿದ್ದು ಆರು ಮಂದಿ ಬಲಿಯಾಗಿದ್ಧಾರೆ. ಅಲ್ಪ ಸಂಖ್ಯಾತ ಹಿಂದೂ ಸಮುದಾಯದ ಜನರ ಮೇಲೆ ತೀವ್ರವಾದಿಗಳು ಅಲ್ಲಲ್ಲಿ ದಾಳಿ ನಡೆಸುತ್ತಲೇ ಇದ್ದಾರೆ. ಹಿಂದೂ ಸಮುದಾಯಕ್ಕೆ ಸೇರಿದ ದೇವಸ್ಥಾನ, ಅಂಗಡಿ ಮುಂಗಟ್ಟುಗಳು, ಮನೆಗಳ ಮೇಲೆ ದಾಳಿಗಳಾಗುತ್ತಿವೆ. ಕೆಲವೆಡೆ ಬಾಂಗ್ಲಾದೇಶದ ಅರೆಸೈನಿಕ ಪಡೆಗಳನ್ನ ನಿಯೋಜಿಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರದಂತಾಗಿದೆ ಎಂಬ ವರದಿಗಳೂ ಇವೆ.
ಕಳೆದ ಬುಧವಾರದಂದು ಢಾಕಾದಿಂದ 100 ಕಿಮೀ ದೂರದಲ್ಲಿರುವ ಚಾಂದ್ಪುರ್ ಗಡಿ ಸಮೀಪದ ಕುಮಿಲಾ ಎಂಬಲ್ಲಿ ದುರ್ಗಾ ಪೂಜೆ ನಡೆಯುತ್ತಿದ್ದ ಮಂದಿರದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಗರ್ಭಗುಡಿಯನ್ನ ಹಾಳು ಮಾಡಿದ್ದರು.