ಪ್ಯಾರಿಸ್: ಅರ್ಜೆಂಟೀನಾದ ಆಟಗಾರ ಡೀಗೋ ಶ್ವರ್ಟ್‌ಮನ್ ವಿರುದ್ಧ ನೇರಸೆಟ್ ಗೆಲುವು ದಾಖಲಿಸುವ ಮೂಲಕ ನಡಾಲ್ ರೋಲ್ಯಾಂಡ್ ಗ್ಯಾರಸ್‌ನಲ್ಲಿ ದಾಖಲೆಯ 13ನೇ ಬಾರಿ ಫೈನಲ್ ಗೇರಿದ್ದಾರೆ. ಈ ಮೂಲಕ ನಡಾಲ್ 13ನೇ ಬಾರಿ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪ್ರಶಸ್ತಿ ಜಯಿಸುವುದರಿಂದ ಕೇವಲ ಒಂದು ಹೆಜ್ಜೆ ದೂರ ನಿಂತಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್ ತಾರೆ ನಡಾಲ್ 6-3, 6-3, 7-6 (7-0) ರಿಂದ ಸ್ವರ್ಟ್‌ಮನ್ ಸವಾಲು ಹಿಮ್ಮೆಟ್ಟಿಸಿದರು. ಫೈನಲ್ ಹಾದಿಯಲ್ಲಿ 34 ಗೇಮ್ ಮಾತ್ರ ಸೋತಿರುವ 34 ವರ್ಷದ ನಡಾಲ್, ಒಂದೂ ಸೆಟ್ ಸೋಲದೆ ಮುನ್ನಡೆದಿದ್ದಾರೆ.
ಮುಂಬರುವ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ನಡಾಲ್, ಅಗ್ರ ಶ್ರೇಯಾಂಕಿತ ನೊವಾಕ್ ಜೋಕೊವಿಕ್ ಮತ್ತು ಸ್ಟೆಾನೋಸ್ ಸಿಸಿಪಾಸ್ ನಡುವಿನ 2ನೇ ಸೆಮಿಫೈನಲ್ ಪಂದ್ಯದ ವಿಜೇತರನ್ನು ನಡಾಲ್ ಎದುರಿಸಲಿದ್ದಾರೆ.