ವಿಶೇಷ ಲೇಖನ: ವಿರಾಜ್.ಕೆ.ಅಣಜಿ
ವಾರದ ತಾರೆ- ತಂಗರಸು ನಟರಾಜನ್
ಕೇವಲ Net Bowler ಆಗಿ ತಂಡದೊಂದಿಗೆ ಹೋಗಿದ್ದ ತಂಗರಸು, ತನ್ನನ್ನು ಅರಸಿ ಬಂದ ಅವಕಾಶ ಬಳಸಿಕೊಂಡು, ಮೂರೂ ಪ್ರಕಾರಗಳ ಕ್ರಿಕೆಟ್‌ಗೆ ಒಂದೇ ಪ್ರವಾಸದಲ್ಲಿ ಪದಾರ್ಪಣೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರವಾದ ಕತೆ.
ಅವಕಾಶಗಳು ಬರುವುದು ಅಪರೂಪ. ಹಾಗೆಯೇ ಅವಕಾಶ ಕ್ರಿಯೇಟ್ ಮಾಡಿಕೊಳ್ಳುವುದು ಸುಲಭವೂ ಅಲ್ಲ. ಆದರೆ, ಅವಕಾಶ
ನಮ್ಮತ್ತ ಒಮ್ಮೆ ತಿರುಗಿ ನೋಡಿದಾಗ ಗಬ್ಬಕ್ಕನೇ ಹಿಡಿದಿಟ್ಟುಕೊಳ್ಳುವುದು ಜಾಣತನ. ಸಾಧಿಸಬೇಕು ಎಂಬ ವ್ಯಕ್ತಿಗೆ ಅದು ಇರಲೇ ಬೇಕಾದ ಹಸಿವೂ ಕೂಡ.
ಇದೇ ರೀತಿ, ಸಾಧನೆ ಮಾಡಬೇಕು ಎಂದು ಕಾದು ಕುಳಿತಿದ್ದ ತಮಿಳುನಾಡಿನ ಸೇಲಂನ ಹುಡುಗ ತಂಗ ರಸು ನಟರಾಜನ್. ರೈಲು
ನಿಲ್ದಾಣಗಳಲ್ಲಿ ಸಾಮಾನು ಸಾಗಿಸುವ ಕೂಲಿಯ ಮಗ. ಜೀವನ ನಿರ್ವಹಣೆಗೆ ರಸ್ತೆಯ ಬದಿ ಗೂಡಂಗಡಿ ಇಟ್ಟುಕೊಂಡಿದ್ದ ಅಮ್ಮನ ಐದನೇ ಮಗ. ಮೂವರು ಅಕ್ಕ, ಒಬ್ಬ ಅಣ್ಣನ ಮುದ್ದಿನ ತಮ್ಮ. ಸಾಧನೆಗೆ ಕುಟುಂಬದ ಮೂಲವು ತೊಂದರೆ ಯಾಗದು. ಆದರೆ, ತಾಳ್ಮೆ, ಕುಟುಂಬದ ಪ್ರೋತ್ಸಾಹ ಅತ್ಯಗತ್ಯ.
ಬಾಲ್ಯದಿಂದಲೂ ನಟರಾಜನ್ ಗೆ ಕ್ರಿಕೆಟ್ ಹುಚ್ಚು. ಟೆನ್ನಿಸ್ ಬಾಲ್‌ನಲ್ಲಿ ಸೇಲಂ ನಗಲ್ಲಿ-ಬೀದಿಗಳಲ್ಲಿ ಬೌಲಿಂಗ್ ಚಮತ್ಕಾರ ಮಾಡುತಿದ್ದರು. ಇದನ್ನು ಕಂಡ ಸ್ನೇಹಿತ ಜಯಪ್ರ ಕಾಶ್ ಎಂಬುವರು ನಟರಾಜನ್‌ಗೆ ಪ್ರೋತ್ಸಾಹ ತುಂಬಿ, ದೊಡ್ಡ ಕನಸು
ಕಾಣಲು ಹುರಿದುಂಬಿಸಿದರು. ಇದರ ಫಲವಾಗೇ, ನಟರಾಜನ್ 2011ರಲ್ಲಿ ಚೆನ್ನೈನ ಕ್ರಿಕೆಟ್ ಕ್ಲಬ್‌ಗೆ ಸೇರುತ್ತಾರೆ.
ಅಲ್ಲಿಂದ ಬೌಲಿಂಗ್ ಒಂದೇ ತಂಗರಸುವಿನ ಕನಸು – ಮನಸು. ಸಾಕಷ್ಟು ತರಬೇತಿ ನಂತರ ಬಿಎಸ್‌ಎನ್‌ಎಲ್ ಪರ ವೃತ್ತಿ ಜೀವನ ಆರಂಭಿಸಿದ ನಟರಾಜನ್ ತಮ್ಮ ಬೌಲಿಂಗ್ ಸಾಮರ್ಥ್ಯವೇನು ಎಂಬುದನ್ನು ಸಾಬೀತು ಮಾಡಿದರು. ಅವರ ಆಟವೇ ಅವರನ್ನು
ರಣಜಿ ಟ್ರೋಫಿಯಲ್ಲಿ ತಮಿಳುನಾಡು ಪರ ಆಡುವ ಅವಕಾಶ ನೀಡಿತು. 16, 19, 23 ವರ್ಷದೊಳಗಿನವರ ಯಾವ ಟೂರ್ನಿ ಯಲ್ಲೂ ಆಡದೇ ನೇರವಾಗಿ ರಣಜಿ ಆಡಿದ ಹಿರಿಮೆ ನಟರಾಜನ್ ಅವರದ್ದು.
2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಟರಾಜನ್ ಅವರನ್ನು ಬರೋಬ್ಬರಿ 3 ಕೋಟಿ ನೀಡಿ ಖರೀದಿಸಿದ್ದು ಅವರ ಜೀವನದ ಗತಿ ಬದಲಿಸಿತು. ಜೋಪಡಿಯಲ್ಲಿದ್ದ ಕುಟುಂಬಕ್ಕೆ ಮಗ ಹೆಮ್ಮೆಯ ಸೂರನ್ನು ತಂದುಕೊಟ್ಟಿದ್ದರು ನಟರಾಜನ್. 2020ರಲ್ಲಿ ದುಬೈನಲ್ಲಿ ನಡೆದ ಐಪಿಎಲ್‌ನಲ್ಲಿ ಸನ್ ರೈಸರ‍್ಸ್ ಹೈದರಾಬಾದ್ ತಂಡದ ಪರ ನಟರಾಜನ್ ಆಡುತ್ತಿದ್ದರು. ತಂಡದ ಪರವಾಗಿ ಟೂರ್ನಿಯ ಎಲ್ಲ 16 ಪಂದ್ಯಗಳಲ್ಲೂ ಆಡಿ, ತನ್ನ ಸಾಮರ್ಥ್ಯ ಸಾಬೀತು ಮಾಡಿದ್ದರು. ಅದ್ಭುತ ಯಾರ್ಕರ್, ನಿಖರ ಸ್ವಿಂಗ್ ಬಾಲ್ ಗಳು, ಡೆತ್ ಓವರ್‌ಗಳಲ್ಲಿ ವಿಕೆಟ್ ಬೀಳಿಸುವ ಮೂಲಕ ತನ್ನ ಪ್ರತಿಭೆ ಸಾಬೀತು ಮಾಡುತ್ತಿದ್ದರು.
ಐಪಿಎಲ್ ನಂತರ, ಭಾರತ ತಂಡ ನೇರವಾಗಿ ಆಸ್ಟ್ರೇಲಿಯಾಗೆ ಹಾರಬೇಕಿತ್ತು. ತಂಡದಲ್ಲಿ ಬೂಮ್ರಾ, ಶಮಿ, ಯಾದವ್, ಇಶಾಂತ್‌ರಂಥ ಬೌಲರ್‌ಗಳ ಪಡೆಯತ್ತು. ಆದರೆ, ತನ್ನ ಬೌಲಿಂಗ್ ಮೂಲಕವೇ ಕಮಾಲ್ ಮಾಡುತ್ತಿದ್ದ ನಟರಾಜನ್ ತಂಡ ದಿಂದ ಹೊರಗಿರಿಸಲು ಆಯ್ಕೆದಾರರಿಗೆ ಮನಸ್ಸಿರಲಿಲ್ಲ. ಮುಖ್ಯ ಬೌಲರ್ ಅಲ್ಲದಿದ್ದರೂ ನೆಟ್ ಬೌಲರ್ ಆಗಿ ತಂಡದಲ್ಲಿರಲಿ ಎಂದು ತಂಡಕ್ಕೆ ಸೇರಿಸಿಕೊಳ್ಳಲಾಯಿತು.
ಇದೇ ನಟರಾಜನ್ ಬದುಕಿನ ಅದೃಷ್ಟವೋ, ಅವಕಾಶವೋ ಆಗಬೇಕಿತ್ತು ಎಂದು ಭವಿಷ್ಯದಲ್ಲಿತ್ತೇನೋ? ದುಬೈನಿಂದ ನಟರಾ
ಜನ್ ಆಸ್ಟ್ರೇಲಿಯಾಗೆ ಹಾರಿದರು. ತನಗೊಪ್ಪಿಸಿದ್ದ ನೆಟ್ ಬೌಲಿಂಗ್ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡಿದ್ದರು. ಆದರೆ, ಐಪಿಎಲ್ ನಲ್ಲಿ ದಣಿದಿದ್ದ ಘಟಾನುಘಟಿ ಬೌಲರ್‌ಗಳು ಒಬ್ಬೊಬ್ಬರಾಗಿ ಗಾಯದ ಸಮಸ್ಯೆಗೆ ತುತ್ತಾಗತೊಡಗಿದರು. ಆಪತ್ತಿಗಾದವನೇ ನೆಂಟ ಎಂಬ ಮಾತಿದೆ.
ಆಗ, ನೆಟ್ ಬೌಲರ್ ಆಗಿದ್ದ ನಟರಾಜನ್ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಲು ಅವಕಾಶ ನೀಡಲಾಯಿತು. ಬಯಸದೇ ಬಂದ ಅದೃಷ್ಟವನ್ನು ನಟರಾಜನ್ ಬಾಚಿ ತಬ್ಬಿದ್ದರು. ತಾನು ನೆಟ್‌ನಲ್ಲಿ ಕೊಹ್ಲಿಯನ್ನು ಔಟ್ ಮಾಡಿದಂತೆ, ಆಸೀಸ್‌ನ ಕೊಹ್ಲಿಯಂತಿರುವ ಮಾರ್ನಸ್ ಲ್ಯಾಬೇಷೇನ್‌ರನ್ನು ನಟರಾಜನ್ ಮೊದಲ ವಿಕೆಟ್ ಆಗಿ ಬಲಿ ಪಡೆದರು.
ಅದು ತಾನೊಬ್ಬ Net bowler ಮಾತ್ರವಲ್ಲ networthy bowler ಕೂಡ ಎಂಬುದನ್ನು ಸಾರಿದಂತಿತ್ತು. ಮುಂದೆ ಮೂರು ಪಂದ್ಯಗಳ ಟಿ20 ಸರಣಿಯಲ್ಲೂ ಭಾರತದ ಪರ ಪದಾರ್ಪಣೆ ಅವಕಾಶ ಬಂತು. ಅಲ್ಲಿ ಮೂರೂ ಪಂದ್ಯಗಳನ್ನಾಡಿ 6 ವಿಕೆಟ್ ಪಡೆದು ಭಾರತದ ಸರಣಿ ಗೆಲುವಿನ ಸವಿಯನ್ನೂ ಉಂಡರು. ಆದರೆ, ಟೆಸ್ಟ್ ಸರಣಿಗೆ ಬೆಂಚ್ ಕಾಯಲೇಬೇಕಾಯತ್ತು. ನಾಲ್ಕನೇ
ಟೆಸ್ಟ್ ವೇಳೆಗೆ ಜಸ್‌ಪ್ರೀತ್ ಬೂಮ್ರಾ ಗಾಯಗೊಂಡಾಗ ನಾಯಕ ಅಜಿಂಕ್ಯ ರಹಾನೆ ಮೊದಲು ಕೂಗಿದ್ದೇ ‘ನಟರಾಜನ್ ವೆಲ್‌ಕಮ್’ ಎಂದು.
ಭಾರತದ 300ನೇ ಟೆಸ್ಟ್ ಆಟಗಾರನಾಗಿ ತಂಡಕ್ಕೆ ಸೇರಿಕೊಳ್ಳುವ ಅಪೂರ್ವ ಅವಕಾಶ ನಟರಾಜನ್ ಪಾಲಿಗೆ ಬಂತು. ಪಂದ್ಯದ ಮೊದಲ ಇನ್ನಿಂಗ್ಸ್ ಬೌಲ್ ಮಾಡಿರುವ ನಟರಾಜನ್, ಮ್ಯಾಥ್ಯೂ ವೇಡ್ ಮತ್ತು ಲ್ಯಾಬುಷೇನ್ ಸಮೇತ 3 ವಿಕೆಟ್ ಕಿತ್ತಿದ್ದಾರೆ. ಎರಡನೇ ಇನಿಂಗ್ ನಲ್ಲಿ ಇನ್ನಷ್ಟು ಕಮಾಲ್ ಮಾಡಲಿ. ಅವರಲ್ಲಿರುವ ಬೌಲರ್‌ನಿಂದ ಭಾರತಕ್ಕೆ ಇನ್ನಷ್ಟು ಗೆಲುವುಗಳು
ಬರಲಿ.
ಬಂದ ಅವಕಾಶಗಳನ್ನು ಬೆಸ್ಟ್ ಆಗಿ ಬಳಸಿಕೊಳ್ಳುತ್ತಿರುವ ನಟರಾಜನ್‌ಗೆ Welldone Champ ಎಂದು ಬೆನ್ನುತಟ್ಟೋೋಣ.