ನವದೆಹಲಿ: ಉತ್ತರಾಖಂಡ ತಂಡದ ನೀಲಮ್ ಭಾರದ್ವಾಜ್ (Neelam Bhardwaj) ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ. ನಾಗಾಲ್ಯಾಂಡ್ ವಿರುದ್ಧ ಹಿರಿಯ ಮಹಿಳೆಯರ ಒಡಿಐ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ನೀಲಮ್ ಭಾರದ್ವಾಜ್ ಅವರು ಆಡಿದ 137 ಎಸೆತಗಳಲ್ಲಿ ಅಜೇಯ 202 ರನ್‌ಗಳನ್ನು ಸಿಡಿಸಿದ್ದಾರೆ. ಇವರ ದ್ವಿಶತಕದ ಬಲದಿಂದ ಉತ್ತರಾಖಂಡ ತಂಡ 259 ರನ್‌ಗಳ ಭರ್ಜರಿ ಗೆಲುವು
18ರ ವಯಸ್ಸಿನ ನೀಲಮ್ ಭಾರದ್ವಾಜ್ ಅವರ ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳು ಹಾಗೂ ಬರೋಬ್ಬರಿ 27 ಬೌಂಡರಿಗಳಿವೆ. ಇವರ ದ್ವಿಶತಕದ ಬಲದಿಂದ ಉತ್ತರಾಖಂಡ ತಂಡ ತನ್ನ ಪಾಲಿನ 50 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 371 ರನ್‌ಗಳನ್ನು ಕಲೆ ಹಾಕಿದೆ. ನೀಲಮ್ ಅವರು ತಮ್ಮ ಮಾಸ್ಟರ್ ಕ್ಲಾಸ್ ಇನಿಂಗ್ಸ್ ನೆರವಿನಿಂದ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಈ ಅಪರೂಪದ ದಾಖಲೆ ಬರೆದ ಆಟಗಾರ್ತಿಯರ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಬಳಿಕ ಸವಾಲಿನ ಗುರಿ ಹಿಂಬಾಲಿಸಿದ ನಾಗಾಲ್ಯಾಂಡ್ ತಂಡ, ಉತ್ತರಾಖಂಡ ತಂಡದ ಬೌಲರ್‌ಗಳ ದಾಳಿಗೆ ನಲುಗಿ ಕೇವಲ 112 ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತದ ಬೌಲರ್ ಹಾಗೂ ಉತ್ತರಾಖಂಡ ತಂಡದ ನಾಯಕಿ ಏಕತಾ ಬಿಸ್ಟ್ ಅವರು ಕೇವಲ 1.40ರ ಎಕಾನಮಿ ರೇಟ್‌ನಲ್ಲಿ ಐದು ವಿಕೆಟ್ ಸಾಧನೆ ಮಾಡಿದರು. ಬಿಸ್ಟ್ ಅವರ ಮಾರಕ ಬೌಲಿಂಗ್ ದಾಳಿ ಹಾಗೂ ನೀಲಮ್ ಅವರ ದ್ವಿಶತಕದ ಬಲದಿಂದ ಉತ್ತರಾಖಂಡ ತಂಡ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿತು.
ನೀಲಮ್ ಭಾರದ್ವಾಜ್ ಅವರಿಗೂ ಮುನ್ನ ಈ ವರ್ಷದ ಆರಂಭದಲ್ಲಿ ಲಿಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ದಿಲ್ಲಿ ತಂಡದ ಶ್ವೇತಾ ಸೆಹ್ರಾವತ್ ಅವರು ದ್ವಿಶತಕ ಸಿಡಿಸಿದ್ದರು. ದಿಲ್ಲಿ ತಂಡದ ಪರ ಆಡಿದ್ದ ಅವರು 150 ಎಸೆತಗಳಲ್ಲಿ 242 ರನ್‌ಗಳನ್ನು ದಾಖಲಿಸಿದ್ದರು. ಪ್ರಸಕ್ತ ವರ್ಷದಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸುವ ಮೂಲಕ ನೀಲಮ್ ಭಾರದ್ವಾಜ್ ಮತ್ತು ಶ್ವೇತಾ ಸೆಹ್ರಾವತ್ ಅವರು ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟ್‌ನ ದಿಗ್ಗಜರಾದ ಸ್ಮೃತಿ ಮಂಧಾನಾ, ಮಿಥಾಲಿ ರಾಜ್ ಅವರು ಕೂಡ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ್ದಾರೆ. ಇದೀಗ ಸ್ಟಾರ್ ಆಟಗಾರರನ್ನು ಒಳಗೊಂಡ ಎಲೈಟ್ ಲಿಸ್ಟ್‌ಗೆ ಇದೀಗ ಈ ಇಬ್ಬರು ಆಟಗಾರ್ತಿಯರು ಸೇರ್ಪಡೆಯಾಗಿದ್ದಾರೆ. ಸ್ಮೃತಿ ಮಂಧಾನಾ ಅವರು 2013-14ರ ಸಾಲಿನಲ್ಲಿ ಗುಜರಾತ್ ಅಂಡರ್ 19 ತಂಡದ ವಿರುದ್ದ ಮಂಧಾನಾ 224 ರನ್‌ಗಳನ್ನು ಬಾರಿಸಿದ್ದರು. ಇನ್ನು ಮಿಥಾಲಿ ರಾಜ್ ಅವರು 2002ರಲ್ಲಿ ಇಂಗ್ಲೆಂಡ್ ವಿರುದ್ಧ 214 ರನ್‌ಗಳನ್ನು ಕಲೆ ಹಾಕಿದ್ದರು.
ಈ ಸುದ್ದಿಯನ್ನು ಓದಿ: Ellyse Perry: ಮಹಿಳಾ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಆರ್‌ಸಿಬಿ ಆಟಗಾರ್ತಿ!