ವಿಶೇಷ ಲೇಖನ: ವಿರಾಜ್.ಕೆ.ಅಣಜಿ
ಒಂದು ಹೊತ್ತಿನ ಊಟಕ್ಕೂ ಕಷ್ಟವಿದ್ದಾಗಲೂ, ಅಪ್ಪನೆಂಬ ಭರವಸೆ ನಾನಿದ್ದೇನೆ ನೀನು ಆಡು ಮಗಾ, ನಾನಿದ್ದೇನೆ ಎಂದಿತ್ತು. ಅಂತಹ ತಂದೆಯೇ ವಿಧಿವಶರಾದಾಗ ಕೊನೆಯ ಬಾರಿ ನೋಡಲೂ ಆಗದಂತೆ ವಿಧಿ ಕಟ್ಟಿಹಾಕಿತ್ತು.
ಸಾಧಕರ ಬದುಕೇ ಹಾಗೆ. ತಮಗಾಗಿ ಕಷ್ಟಪಟ್ಟು, ಕನಸು ಹೊತ್ತು ತಮ್ಮನ್ನು ದಡ ಸೇರಿಸಿದವರನ್ನು ಇನ್ಮುಂದೆ ಚೆನ್ನಾಗಿ ನೋಡಿ ಕೊಳ್ಳಬೇಕು ಎಂದುಕೊಂಡಾಗ, ಕ್ರೂರ ವಿಧಿ ತನ್ನ ಆಟ ತೋರಿಸಿಬಿಡುತ್ತದೆ. ಎತ್ತರೆತ್ತರಕ್ಕೆ ಹೋದಷ್ಟೂ ತಮ್ಮವರನ್ನು ಕಳೆದು ಕೊಂಡ ಸಾಧಕರ ಕಣ್ಣುಗಳು ಆಗಾಗ ತೇವವಾಗುತ್ತಲೇ ಇರುತ್ತವೆ.
ಇಂದಿನ ನಮ್ಮ ವಾರದ ತಾರೆಯ ಕತೆಯೂ ಬದುಕೂ ಇಂಹದ್ದೇ. ಮೊಹಮ್ಮದ್ ಸಿರಾಜ್. ದುಬೈನಲ್ಲಿ ನಡೆಯುತ್ತಿದ್ದ ಐಪಿಎಲ್ ನಲ್ಲಿ ಒಮ್ಮಿಂದೊಮ್ಮೆ ಮಿಂಚಿ ಬಂದ ಹೆಸರು. ನಿಮಗೆ ನೆನಪಿರಬಹುದು, ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಬಿರುಗಾಳಿ ಯಂಥ ಬೌಲಿಂಗ್ ಮಾಡಿ, 17 ರನ್‌ಗೆ 4 ವಿಕೆಟ್ ಕಳೆದು ಕೊಂಡು, ಕೆಕೆಆರ್ ಪೇಚಿಗೆ ಸಿಲುಕಿಸುವಂತೆ ಮಾಡಿದ್ದರು.
ಐಪಿಎಲ್ನ ಒಂದೇ ಪಂದ್ಯದಲ್ಲಿ ಎರಡು ಮೇಡನ್ ಓವರ್ ಮಾಡಿದ ಏಕೈಕ ಬೌಲರ್ ಎಂಬ ದಾಖಲೆಯನ್ನೂ ಮಾಡಿದ್ದರು. ಅಂದು ಸಿರಾಜ್ ಹೆಸರು ದೊಡ್ಡದಾಗಿ ಭಾರತದೆಲ್ಲೆಡೆ ರಿಂಗಿಣಿಸಿತ್ತು. ಸಿರಾಜ್ ಹೆಸರು ದೊಡ್ಡದಾಗಿ ಕೇಳುವುದರಿಂದ ಹಿಂದೆ, ಅವರ ತಂದೆಯ ಕನಸಿತ್ತು. ಒಂದಿಡೀ ಕುಟುಂಬದ ತ್ಯಾಗವಿತ್ತು. ತನ್ನದೂ ಒಂದು ದಿನ ಬರಲಿದೆ ಎಂದು ನಂಬಿದ್ದ ಯುವಕನ ಕಾಯುವಿಕೆಯಿತ್ತು. ಅದರೆ, ಸಿರಾಜ್ ಇಂದು ಭರವಸೆ ಮೂಡಿಸುತ್ತಿದ್ದರೆ ಅದು ಒಂದೇ ದಿನದಲ್ಲಿ ಆಗಿರುವ ಮ್ಯಾಜಿಕ್ ಅಲ್ಲ, ಅದಕ್ಕಾಗಿ ಆತ ಪಟ್ಟಿರುವ ಪಡಿಪಾಟಲು ಅಷ್ಟಿಷ್ಟಲ್ಲ. ಇನ್‌ಸ್ವಿಂಗ್ ಮತ್ತು ಸ್ಲೋ ಬೌಲಿಂಗ್ ಮೂಲಕ ಮೆಚ್ಚುಗೆ ಪಾತ್ರರಾಗು ತ್ತಿರುವ ಸಿರಾಜ್ ಎಂದೂ ಕ್ರಿಕೆಟ್ ಅಕಾಡೆಮಿಗೆ ಹೋದವರಲ್ಲ.
ಹುಟ್ಟಿನಿಂದಲೂ ಎಲ್ಲಿಲ್ಲದ ಬಡತನ. ಅಪ್ಪ ರಿಕ್ಷಾ ಓಡಿಸಿಕೊಂಡು ಬದುಕು ಸಾಗಿಸುತ್ತಿದ್ದವರು. ಶಾಲೆಗೂ ಕಳುಹಿಸಲು ಶಕ್ತಿ ವಂತರಲ್ಲದ ಕುಟುಂಬವದು. ಪ್ರತಿ ದಿನದ ಊಟವನ್ನೂ ದುಡಿದು ತಂದೇ ಉಣ್ಣಬೇಕು. ಇಂತಹ ಸ್ಥಿತಿಯಲ್ಲಿ ಕ್ರಿಕೆಟ್ ಅಕಾಡೆಮಿ ಕನಸಿನ ಮಾತು. ಸಿರಾಜ್ ಪಾಲಿಗೆ ಗಲ್ಲಿ ಕ್ರಿಕೆಟ್ ಆಡುವುದೇ ಪಾಠಶಾಲೆ. ಸರಕಾರಿ ಶಾಲೆಗೆ ಸೇರಿಸಿದ್ದರೂ, ಓದಿಗಿಂತ ಕ್ರಿಕೆಟ್‌ನತ್ತ ಮನಸ್ಸು ಎಳೆಯುತ್ತಿತ್ತು. ಹೀಗಾಗಿ ಶಾಲೆಗೆ ಚಕ್ಕರ್ ಹಾಕಿ, ಗಲ್ಲಿಗಳಲ್ಲಿ ಕ್ರಿಕೆಟ್ ಆಡುವವರ ಮಧ್ಯ ಸಿರಾಜ್ ಸೇರುತ್ತಿದ್ದರು.
ಎಲ್ಲರೂ ಬ್ಯಾಟಿಂಗ್ ಬೇಕು ಎಂದು ಕೊಸರಾಡುತ್ತಿದ್ದರೆ, ಸಿರಾಜ್ ರಬ್ಬರ್ ಅಥವಾ ಟೆನ್ನಿಸ್ ಬಾಲ್ ಹಿಡಿದು ಬೌಲಿಂಗ್‌ಗೆ ನಿಂತು ಬಿಡುತ್ತಿದ್ದರು. ಅದೇ ಅವರ ಜೀವನದ ಟರ್ನಿಂಗ್ ಪಾಯಿಂಟ್ ಆಗಬಹುದು ಎಂಬುದು ಯಾರೂ ಊಹಿಸಿರಲಿಲ್ಲ. ಕ್ರಿಕೆಟರ್ ಆಗಬೇಕು ಎಂಬ ಕನಸು ಸಿರಾಜ್ ಅವರಲ್ಲಿ ಟಿಸಿ ಲೊಡೆದಿತ್ತು. ತಾನೊಬ್ಬ ಫಾಸ್‌ಟ್ ಬೌಲರ್ ಆಗಬೇಕು ಎಂಬ ಸ್ಪಷ್ಟತೆ ಮೂಡ ತೊಡಗಿತು. ಆದರೆ, ಮನೆಯಲ್ಲಿ ಇದಕ್ಕೆ ಬೇಕಾದ ಹಣಕಾಸಿನ ನೆರವು ನೀಡು ವವರು ಯಾರೂ ಇರಲಿಲ್ಲ.
ಮನೆ ನಿಭಾಯಿಸುತ್ತಿದ್ದ ಸಿರಾಜ್ ತಂದೆಯ ಆಟೋ ರಿಕ್ಷಾ ಮಾತ್ರ. ಆದರೂ ಅಪ್ಪನೆಂಬ ಭರವಸೆ ನೀನು ಕ್ರಿಕೆಟ್ ಆಡು ಮಗಾ, ನಿನಗಾಗಿ ನಾನಿದ್ದೇನೆ ಎಂದು ಹೇಳಿತ್ತು. ಆ ಮಾತೇ ಸಿರಾಜ್ ಅವರ ಶಕ್ತಿಯಾಗಿತ್ತು. ಸ್ನೇಹಿತನ ನೆರವಿನಿಂದ 2015ರಲ್ಲಿ ಚಾರ್ ಮಿನಾರ್ ಕ್ರಿಕೆಟ್ ಕ್ಲಬ್ ಸೇರಿದ ಸಿರಾಜ್ ಅಂದಿನಿಂದ ದಣಿ ದಿಲ್ಲ. ತನ್ನ ಬೌಲಿಂಗ್ ಮೂಲಕ 2015ರ ರಣಜಿ ತಂಡದಲ್ಲಿ ಸ್ಥಾನ ಗಿಟ್ಟಿಸಿ ಕೊಂಡು, 2016ರಲ್ಲಿ ಹೈದರಾಬಾದ್ ತಂಡದ ಮುಖ್ಯ ಭಾಗವಾಗಿ ಕ್ವಾರ್ಟರ್ ಫೈನಲ್ ತಲುಪಿಸಿ, ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಸ್ಥಾನ ಅಲಂಕರಿಸಿದ್ದರು.
ನಂತರ ಭಾರತ ಎ ತಂಡ ಪ್ರತಿನಿಧಿಸಿ, ವಿಜಯ್ ಹಜಾರೆ ಟೂರ್ನಿ, ದೇವದರ್ ಟ್ರೋಫಿಯಲ್ಲಿ ತಾನು ಭಾರತ ತಂಡದ
ಭವಿಷ್ಯದ ಬೌಲರ್ ಎಂಬುದನ್ನು ಸಾರಿದ್ದರು. ಐಪಿಎಲ್ ಹರಾಜಿನಲ್ಲಿ ಸಿರಾಜ್‌ಗೆ ಬೇಸ್ ವ್ಯಾಲ್ಯೂ 20ಲಕ್ಷ ಮಾತ್ರವಿದ್ದರೂ ಹಿಂದುಮುಂದೆ ನೋಡದೇ, ಸನ್ ರೈಸರ‍್ಸ್ ಹೈದಾರಬಾದ್ ತಂಡ ಬರೋಬ್ಬರಿ 2.6 ಕೋಟಿ ನೀಡಿ ತನ್ನೆೆಡೆ ಸೇರಿಸಿಕೊಂಡಿತ್ತು. ಇದೇ ಸಿರಾಜ್ ಬೌಲಿಂಗ್‌ನ ಬಂಡವಾಳ!
ದುಬೈ ಐಪಿಎಲ್ ಮುಗಿಸಿಕೊಂಡು ಆಸ್ಟ್ರೇಲಿಯಾ ವಿಮಾನ ಏರಿದ್ದ ಸಿರಾಜ್‌ಗೆ, ಬರಸಿಡಿಲ ಸುದ್ದಿಯೊಂದು ಕಾದಿತ್ತು. ಶ್ವಾಸ ಕೋಶದ ಸೋಂಕಿನಿಂದ ಸಿರಾಜ್ ತಂದೆ ಮೊಹಮ್ಮದ್ ಗೌಸ್ ಭಾರತದಲ್ಲಿ ವಿಧಿವಶರಾಗಿದ್ದರು. ಕರೋನಾ ನಿಯಮಗಳ ಪ್ರಕಾರ, ಒಮ್ಮೆ ವಾಪಾಸ್ ಆದರೆ ಮತ್ತೆ ತಂಡ ಸೇರಿಕೊಳ್ಳುವ ಅವಕಾಶವಿರಲಿಲ್ಲ. ತಂದೆಯನ್ನು ಮನದಲ್ಲೇ ನೆನೆದು, ಗಟ್ಟಿ ಮನಸ್ಸು ಮಾಡಿಕೊಂಡು ಸಿರಾಜ್ ಆಸ್ಟ್ರೇಲಿಯಾದಲ್ಲೇ ಉಳಿದರು.
ಮೆಲ್‌ಬೋರ್ನ್ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿ ಐದು ವಿಕೆಟ್ ಗಳಿಸಿ, ತನ್ನ ತಂದೆ ಕಂಡಿದ್ದ ಕನಸಿಗೆ ಗೌರವ ಸಲ್ಲಿಸಿದ್ದರು. ಇದೇ ಅಲ್ಲವೇ ಬದುಕು? ನೋವುಗಳನ್ನು ನುಂಗಿ ಬದುಕಬೇಕು, ಕಣ್ಣೀರು ಒರೆಸಿಕೊಂಡು ಬದುಕಿನ ಪ್ರಯಾಣ ಮುಂದುವರಿಸಬೇಕು. ಸಾಧಕರ ಬದುಕು ಐಶಾರಾಮಿಯಾಗಿ ಕಾಣುತ್ತವೆ. ಆದರೆ, ಅದರ ಹಿಂದಿನ ನೋವುಗಳನ್ನೆಲ್ಲ ಸಾಧಕರು ತಮ್ಮ ಸಾಧನೆಗೆ ತೈಲ ವನ್ನಾಗಿ ಬಳಸಿಕೊಂಡಿರುತ್ತಾರೆ ಎಂಬುದು ಅಷ್ಟೆ ನಿಜ. ಇಂತಹದ್ದೇ ಹಾದಿಯಲ್ಲಿ ಹೊರಟಿರುವ ಮೊಹಮ್ಮದ್ ಸಿರಾಜ್
ಅವರಿಗೆ ಶುಭವಾಗಲಿ, ಭಾರತ ತಂಡಕ್ಕೆ ಇನ್ನಷ್ಟು ಕೀರ್ತಿ ತರುವಂತಾಗಲಿ. ಆಲ್ ದ ಬೆಸ್ಟ್- ಸಿರಾಜ್.