ಹೊಸದಿಲ್ಲಿ: ತಮ್ಮ ಹದಿನಾಲ್ಕು ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ನ್ಯೂಜಿಲೆಂಡ್ ಸ್ಟಾರ್ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ (Martin Guptil) ಬುಧವಾರ (ಜನವರಿ 8) ವಿದಾಯ ಘೋಷಿಸಿದ್ದಾರೆ. ನ್ಯೂಜಿಲೆಂಡ್ ಪರ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ 367 ಪಂದ್ಯಗಳಿಂದ 23 ಶತಕ ಸಿಡಿಸಿದ್ದು, ಹಲವು ದಾಖಲೆಗಳನ್ನು ಬರೆದಿದ್ದಾರೆ.
ನ್ಯೂಜಿಲೆಂಡ್ ಪರ ಅತಿ ಹೆಚ್ಚು ಟಿ20ಐ ಪಂದ್ಯಗಳಲ್ಲಿ (122) ಕಾಣಿಸಿಕೊಂಡಿರುವ ಗಪ್ಟಿಲ್, ಬ್ಲ್ಯಾಕ್ ಕ್ಯಾಪ್ಸ್ ಪರ ಲೀಡಿಂಗ್ ಸ್ಕೋರರ್ (3531 ರನ್) ಆಗಿದ್ದಾರೆ. ಅಲ್ಲದೆ ಏಕದಿನ ಸ್ವರೂಪದಲ್ಲಿ ರಾಸ್ ಟೇಲರ್ ಹಾಗೂ ಸ್ಟಿಫನ್ ಫ್ಲೇಮಿಂಗ್ ನಂತರ ಮೂರನೇ ಗರಿಷ್ಠ ಸ್ಕೋರರ್ (7346 ರನ್) ಎನಿಸಿಕೊಂಡಿದ್ದಾರೆ.
2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ
ವೆಸ್ಟ್ ಇಂಡೀಸ್ ವಿರುದ್ಧ 2009ರಲ್ಲಿ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಾರ್ಟಿನ್, ತಮ್ಮ ಮೊದಲ ಪಂದ್ಯದಲ್ಲಿಯೇ ಚೊಚ್ಚಲ ಶತಕ ಸಿಡಿಸಿದ ಮೊದಲ ಕಿವೀಸ್ ಆಟಗಾರ ಎನಿಸಿಕೊಂಡಿದ್ದರು. 2011ರಲ್ಲಿ ಭಾರತದ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ತಮ್ಮ ಅದ್ಭುತ ಪ್ರದರ್ಶನ ತೋರಿದ್ದರು.
Martin Guptill retires as New Zealand's leading run-scorer in men's T20Is, and third in ODIs behind Ross Taylor and Stephen Fleming 👏 pic.twitter.com/NFF1Oxl1QP
— ESPNcricinfo (@ESPNcricinfo) January 8, 2025
ದಾಖಲೆಗಳ ಸರದಾರ
2015ರ ಏಕದಿನ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಮೆರೆದಿದ್ದ ಮಾರ್ಟಿನ್ ಗಪ್ಟಿಲ್, ಅಜೇಯ 237 ರನ್ ಗಳಿಸಿದ್ದು, ಇದು ಇದುವರೆಗೂ ಏಕದಿನ ವಿಶ್ವಕಪ್ ಟೂರ್ನಿಯ ಗರಿಷ್ಠ ಸ್ಕೋರ್ ಆಗಿದೆ. ಅಲ್ಲದೆ ನ್ಯೂಜಿಲೆಂಡ್ ಪರ ಚೊಚ್ಚಲ ದ್ವಿಶತಕ ಸಿಡಿಸಿದ ಕೀರ್ತಿಯೂ ಮಾರ್ಟಿನ್ ಗಪ್ಟಿಲ್‌ಗೆ ಸಲ್ಲುತ್ತದೆ. ಅಲ್ಲದೆ 2012ರಲ್ಲಿ ಇಂಗ್ಲೆಂಡ್ ವಿರುದ್ಧ ಸಿಡಿಸಿದ್ದ ಅಜೇಯ 189 ರನ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಬಾರಿಸಿದ್ದ 180* ರನ್ ನ್ಯೂಜಿಲೆಂಡ್ ಪರ ಏಕದಿನ ದಲ್ಲಿ ಟಾಪ್ ಸ್ಕೋರ್ ಆಗಿದೆ.
ಟಿ20ಐನಲ್ಲೂ ಮಿಂಚು
ಸ್ಫೋಟಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಟಿ20-ಐ ನಲ್ಲೂ ಎರಡು ಶತಕ ಸಿಡಿಸಿದ್ದಾರೆ. 2012ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 69 ಎಸೆತಗಳಲ್ಲಿ 101* ರನ್ ಗಳಿಸುವ ಮೂಲಕ ಚೊಚ್ಚಲ ಶತಕ ಸಿಡಿಸಿದ್ದರೆ, 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 54 ಎಸೆತಗಳಲ್ಲಿ 105 ರನ್ ಸಿಡಿಸಿದ್ದರು.
ವೈಟ್ ಬಾಲ್ ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲೂ ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿರುವ ಗಪ್ಟಿಲ್, 47 ಪಂದ್ಯಗಳಿಂದ 2,586 ರನ್ ಕಲೆ ಹಾಕಿದ್ದಾರೆ. ಬಾಂಗ್ಲಾದೇಶ ವಿರುದ್ಧ 2010ರಲ್ಲಿ ನಡೆದಿದ್ದ ಪಂದ್ಯದಲ್ಲಿ ಗಳಿಸಿದ್ದ 189 ರನ್ ಗರಿಷ್ಠ ಸ್ಕೋರ್ ಆಗಿದ್ದರೆ, ಜಿಂಬಾಬ್ವೆ (101 ರನ್) ಹಾಗೂ ಶ್ರೀಲಂಕಾ (156) ವಿರುದ್ಧವೂ ಶತಕ ಸಿಡಿಸಿದ್ದಾರೆ.
ನ್ಯೂಜಿಲೆಂಡ್ ಪರ ಆಡುವುದು ಬಾಲ್ಯದ ಕನಸು: ಮಾರ್ಟಿನ್ ಗುಪ್ಟಿಲ್
“ನಾನು ಬಾಲಕನಾಗಿದ್ದಾಗ ನ್ಯೂಜಿಲೆಂಡ್ ತಂಡದ ಪರ ಆಡುವುದು ನನ್ನ ದೊಡ್ಡ ಕನಸಾಗಿತ್ತು. ಅದರಂತೆ ನನ್ನ ದೇಶಕ್ಕಾಗಿ 367 ಅಂತಾರಾಷ್ಟ್ರೀಯ ಪಂದ್ಯ ಆಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ,” ಎಂದು ಮಾರ್ಟಿನ್ ಗಪ್ಟಿಲ್ ತಿಳಿಸಿದ್ದಾರೆ.
ಬಾಲ್ಯದ ಕೋಚ್‌ಗೆ ಧನ್ಯವಾದ
“ನನ್ನ ಕ್ರಿಕೆಟ್ ವೃತ್ತಿ ಜೀವನದುದ್ದಕ್ಕೂ ಬೆಂಬಲ ನೀಡಿದ ಸಹ ಆಟಗಾರರು, ತರಬೇತಿ ಸಿಬ್ಬಂದಿಗಳು ಅದರಲ್ಲೂ ಮುಖ್ಯವಾಗಿ ನನ್ನ ಅಂಡರ್ 19 ಕ್ರಿಕೆಟ್ ನಲ್ಲಿ ತರಬೇತಿ ನೀಡಿ ನನ್ನ ಕ್ರಿಕೆಟ್ ಜೀವನದ ಭವಿಷ್ಯ ರೂಪಿಸಿದ ಮಾರ್ಕ್ ಡೊನ್ನೆಲ್‌ಗೆ ಧನ್ಯವಾದ ತಿಳಿಸಲು ಬಯಸುತ್ತೇನೆ,” ಎಂದು ಮಾರ್ಟಿನ್ ಗಪ್ಟಿಲ್ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: NZ vs SL: ಎರಡನೇ ಪಂದ್ಯದಲ್ಲಿಯೂ ಶ್ರೀಲಂಕಾಗೆ ನಿರಾಶೆ, ಒಡಿಐ ಸರಣಿ ವಶಪಡಿಸಿಕೊಂಡ ಕಿವೀಸ್!