ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತದ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ(Nitish Reddy) ಶತಕ ಬಾರಿಸಿ ಮಿಂಚಿದ್ದಾರೆ. ಮೂರನೇ ದಿನದಾಟದಲ್ಲಿ ಸೊಗಸಾದ ಬ್ಯಾಟಿಂಗ್ ಮೂಲಕ ಆಸೀಸ್ ಬೌಲರ್‌ಗಳನ್ನು ದಂಡಿಸಿದ ನಿತೀಶ್ ಕುಮಾರ್ ಐತಿಹಾಸಿಕ ಮೆಲ್ಬರ್ನ್ ಅಂಗಳದಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಶತಕದ ಖಾತೆ ತೆರೆದರು. ಮಗನ ಸಾಧನೆಯನ್ನು ಕಂಡು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ತಂದೆ ಮುತ್ಯಾಲ ರೆಡ್ಡಿ(Mutyala Reddy) ಆನಂದಭಾಷ್ಪ ಸುರಿಸಿದರು. ಈ ಭಾವುಕ ವಿಡಿಯೊ ವೈರಲ್(Video Viral) ಆಗಿದೆ.
ನಿತೀಶ್ ಕುಮಾರ್ ರೆಡ್ಡಿ ತಂದೆ ಮುತ್ಯಾಲ ರೆಡ್ಡಿ ಮಾತ್ರವಲ್ಲದೆ ಕಾಮೆಂಟ್ರಿ ಮಾಡುತ್ತಿದ್ದ ರವಿಶಾಸ್ತ್ರಿ ಕೂಡ ಭಾರತೀಯ ಕ್ರಿಕೆಟಿಗನ ಸಾಧನೆ ಕಂಡು ಖುಷಿಯಲ್ಲಿ ಕಣ್ಣೀರು ಹಾಕಿದರು. ಈ ವಿಡಿಯೊ ಕೂಡ ವೈರಲ್ ಆಗಿದೆ.
ನಿತೀಶ್ ಕುಮಾರ್ ಅವರು ನವೆಂಬರ್ 22 ರಂದು ಪರ್ತ್ ಮೈದಾನದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಈ ವೇಳೆ ನಿತೀಶ್ ತಮ್ಮ ತಂದೆ ತನಗಾಗಿ ಮಾಡಿದ ತ್ಯಾಗವನ್ನು ನೆನೆದು ಭಾವುಕರಾಗಿದ್ದರು. ಈ ವಿಶೇಷ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು.
ಕ್ರಿಕೆಟಿಗನಾಗಲು ತಂದೆಯೇ ಕಾರಣ…
ಅಂದು ಬಿಸಿಸಿಐ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ನಿತೀಶ್ ತಾವು ಕ್ರಿಕೆಟಿಗನಾಗಲು ತಂದೆಯೇ ಕಾರಣ ಮತ್ತು ಅವರು ಪಟ್ಟ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದರು. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಚಿಕ್ಕ ಹುಡುಗನಿದ್ದಾಗ ಕ್ರಿಕೆಟ್‌ನಲ್ಲಿ ಅಷ್ಟೊಂದು ಆಸಕ್ತಿಯನ್ನು ಹೊಂದಿರಲಿಲ್ಲ. ನನಗಾಗಿ ನನ್ನ ತಂದೆ ಕೆಲಸವನ್ನು ಬಿಟ್ಟಿದ್ದರು ಹಾಗೂ ನನ್ನ ಕಥೆಯ ಹಿಂದೆ ಅವರ ಸಾಕಷ್ಟು ತ್ಯಾಗವಿದೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾಗ ನನ್ನ ತಂದೆ ಅಳುತ್ತಿದ್ದ ಸಂದರ್ಭವನ್ನು ನಾನು ನೋಡಿದ್ದೇನೆ. ಮೋಜಿಗಾಗಿ ಕ್ರಿಕೆಟ್ ಆಡುತ್ತಿರುವ ನನಗೆ ನಮ್ಮ ತಂದೆ ಯಾಕಿಷ್ಟು ತ್ಯಾಗವನ್ನು ಮಾಡುತ್ತಿದ್ದಾರೆಂಬ ಭಾವನೆ ನನಗೆ ಉಂಟಾಗಿತ್ತು. ಆ ಸಂದರ್ಭದಲ್ಲಿ ನಾನು ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡೆ ಹಾಗೂ ಕಠಿಣ ಪರಿಶ್ರಮದತ್ತ ಗಮನ ಹರಿಸಿದೆ. ಇದು ನನ್ನನ್ನು ಕ್ರಿಕೆಟ್‌ನಲ್ಲಿ ಈ ಮಟ್ಟಕ್ಕೆ ಬೆಳೆಯುವಂತೆ ಮಾಡಿತ್ತು’ ಎಂದು ಹೇಳಿದ್ದರು.
ಇದನ್ನೂ ಓದಿ AUS vs IND: ನಿತೀಶ್ ರೆಡ್ಡಿ ಶತಕ; ಭಾರತ ದಿಟ್ಟ ಹೋರಾಟ
ತಂದೆಗೆ ಜೆರ್ಸಿ ಉಡುಗೊರೆ
ನಿತೀಶ್ ಕುಮಾರ್ ಅವರು ತಮ್ಮ ಮೊದಲ ಟೀಮ್ ಇಂಡಿಯಾದ ಜೆರ್ಸಿಯನ್ನು ತಂದೆಗೆ ಉಡುಗೊರೆಯಾಗಿ ನೀಡಿದ್ದರು. ಇದೀಗ ಮಗನ ಸಾಧನೆ ಕಂಡು ಸಂತಸದಲ್ಲಿ ಆನಂದಭಾಷ್ಪ ಸುರಿಸಿದ್ದಾರೆ.
ದಾಖಲೆ ಬರೆದ ನಿತೀಶ್
21 ವರ್ಷದ ನಿತೀಶ್ ಕುಮಾರ್ ರೆಡ್ಡಿ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾದಲ್ಲಿ ಭಾರತದ ಪರ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಮೂರನೇ ಕಿರಿಯ ಬ್ಯಾಟರ್ ಎನಿಸಿಕೊಂಡರು. ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 1992ರಲ್ಲಿ18 ವರ್ಷ 256ದಿನ ಇರುವಾಗ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಶತಕ ಬಾರಿಸಿದ್ದರು. ರಿಷಭ್ ಪಂತ್(21 ವರ್ಷ 92ದಿನ) ದ್ವಿತೀಯ ಸ್ಥಾನದಲ್ಲಿದ್ದಾರೆ.