ನವದೆಹಲಿ: ವಿಶ್ವದ ಅತ್ಯುತ್ತಮ ಕ್ರಿಕೆಟಿಗನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಇದರಲ್ಲಿ ಬಹುತೇಕರು ಮೂರು ಸ್ವರೂಪದಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿರುವ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡುತ್ತಾರೆ. ಇನ್ನು ಕೆಲವರು ವಿಶ್ವದ ಯಾವುದೇ ಕಂಡೀಷನ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಭೀತಿ ಹುಟ್ಟಿಸುವ ಜಸ್‌ಪ್ರೀತ್ ಬುಮ್ರಾ ಅವರನ್ನು ಆರಿಸುತ್ತಾರೆ. ಆದರೆ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಅವರು ತಮ್ಮ ಸಹ ಆಟಗಾರನನ್ನು(Harry Brook) ಆಯ್ಕೆ ಮಾಡಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಜೋ ರೂಟ್, ತಮ್ಮ ಸಹ ಆಟಗಾರ ಹ್ಯಾರಿ ಬ್ರೂಕ್ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಪಂದ್ಯದಲ್ಲಿ ಯಾವುದೇ ಒತ್ತಡವಿದ್ದರೂ ಅವರು ತಮ್ಮ ಬ್ಯಾಟಿಂಗ್ ಮೂಲಕ ನಿವಾರಿಸುತ್ತಾರೆ. ಹಾಗಾಗಿ ಪ್ರಸ್ತುತ ವಿಶ್ವದ ಅತ್ಯುತ್ತಮ ಆಟಗಾರ ಹ್ಯಾರಿ ಬ್ರೂಕ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹ್ಯಾರಿ ಬ್ರೂಕ್ ವಿಶ್ವದ ಅತ್ಯುತ್ತಮ ಆಟಗಾರ
“ಪ್ರಸ್ತುತ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್. ಅವರು ಪಂದ್ಯದಲ್ಲಿ ಯಾವುದೇ ಒತ್ತಡವಿದ್ದರೂ ಅದಕ್ಕೆ ಹೊಂದಿಕೊಂಡು ಆಡುತ್ತಾರೆ. ಎಂಥಾ ಸನ್ನಿವೇಶವಿದ್ದರೂ ಅವರು ನಿಮ್ಮ ತಲೆಯ ಮೇಲೆ ಸಿಕ್ಸರ್ ಸಿಡಿಸುತ್ತಾರೆ. ಸ್ಕೂಪ್ ಶಾಟ್ ಮೂಲಕವೂ ಅವರು ನಿಮ್ಮ ತಲೆಯ ಮೇಲೆ ಸಿಕ್ಸರ್ ಬಾರಿಸುತ್ತಾರೆ. ಸ್ಪಿನ್ನರ್‌ಗಳಿಗೆ ಮುಲಾಜಿಲ್ಲದೆ ಹೊಡೆಯುತ್ತಾರೆ, ಸೀಮ್ ಬೌಲರ್‌ಗಳಿಗೂ ಅದೇ ರೀತಿ ಬಾರಿಸುತ್ತಾರೆ,” ಎಂದು ಜೋ ರೂಟ್ ತಿಳಿಸಿದ್ದಾರೆ.
ಒಲ್ಲೀ ಪೋಪ್ ಅವರಂಥ ಬ್ಯಾಟ್ಸ್‌ಮನ್ ಜತೆ ಹ್ಯಾರಿ ಬ್ರೂಕ್ ಬ್ಯಾಟ್ ಮಾಡಿದರೆ, ಪಂದ್ಯದಲ್ಲಿ ರನ್ ಹೊಳೆ ಹರಿಯಲಿದೆ. ಇದನ್ನು ಎದುರಾಳಿ ತಂಡದ ಬೌಲರ್‌ಗಳು ನಿಯಂತ್ರಿಸಲು ಸಾಧ್ಯವಿಲ್ಲ. ಈ ಜೋಡಿಯನ್ನು ಕಟ್ಟಿ ಹಾಕುವುದು ತುಂಬಾ ಕಠಿಣ ಎಂದು ಇದೇ ಇಂಗ್ಲೆಂಡ್ ಹಿರಿಯ ಬ್ಯಾಟ್ಸ್‌ಮನ್ ಹೇಳಿದ್ದಾರೆ.
ಹ್ಯಾರಿ ಬ್ರೂಕ್-ಒಲ್ಲೀ ಪೋಪ್ ಜೋಡಿಗೆ ರೂಟ್ ಮೆಚ್ಚುಗೆ
“ಒಲ್ಲೀ ಪೋಪ್ ಜೊತೆ ಹ್ಯಾರಿ ಬ್ರೂಕ್ ಬ್ಯಾಟ್ ಮಾಡಿದರೆ ಇವರನ್ನುಕಟ್ಟಿ ಹಾಕುವುದು ತುಂಬಾ ಕಷ್ಟ. ಈ ಜೋಡಿ ಪಂದ್ಯದಲ್ಲಿ ರನ್ ಹೊಳೆಯನ್ನು ಹರಿಸಲಿದ್ದಾರೆ. ಈ ವೇಳೆ ಇವರನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಈ ಜೋಡಿ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದೆ,” ಎಂದು ಜೋ ರೂಟ್ ಶ್ಲಾಘಿಸಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಹ್ಯಾರಿ ಬ್ರೂಕ್ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ 129 ರನ್‌ಗಳು ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 55 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದಕ್ಕೂ ಮುನ್ನ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅವರು ಪ್ರಥಮ ಇನಿಂಗ್ಸ್‌ನಲ್ಲಿ 171 ರನ್‌ಗಳನ್ನು ಬಾರಿಸಿದ್ದರು. ಈ ಸರಣಿಯಲ್ಲಿ ಬ್ಯಾಟ್ ಮಾಡಿದ ಮೂರು ಇನಿಂಗ್ಸ್‌ಗಳಲ್ಲಿ ಎರಡು ಶತಕಗಳು ಹಾಗೂ ಒಂದು ಅರ್ಧ ಶತಕವನ್ನು ಬಾರಿಸಿದ್ದಾರೆ.
ಈ ಸುದ್ದಿಯನ್ನು ಓದಿ:ENG vs NZ: ಜಾಕ್ ಕಾಲಿಸ್ ದಾಖಲೆ ಮುರಿಯುವ ಸನಿಹದಲ್ಲಿ ಜೋ ರೂಟ್!