ನವದೆಹಲಿ: ಸೆಂಚೂರಿಯನ್ನಗ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ಗುರುವಾರದಿಂದ (ಡಿಸೆಂಬರ್ 26) ಪಾಕಿಸ್ತಾನ ವಿರುದ್ಧ (PAK vs SA) ಆರಂಭವಾಗಲಿರುವ ಮೊದಲನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ ತನ್ನ ಪ್ಲೇಯಿಂಗ್ XI ಅನ್ನು ಪ್ರಕಟಿಸಿದೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅಧಿಕೃತವಾಗಿ ಅರ್ಹತೆ ಪಡೆಯಲು ತೆಂಬಾ ಬವೂಮಾ ನಾಯಕತ್ವದ ಆಫ್ರಿಕಾ ತಂಡಕ್ಕೆ ಇನ್ನು ಕೇವಲ ಒಂದು ಜಯದ ಅಗತ್ಯವಿದೆ.
ಮೊದಲನೇ ಟೆಸ್ಟ್ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡದ ಪ್ಲೇಯಿಂಗ್ xiನಲ್ಲಿ ಮೊದಲನೇ ಆಯ್ಕೆಯ ಸ್ಪಿನ್ನರ್ ಇಲ್ಲ. ಯುವ ವೇಗದ ಬೌಲರ್ ಕಾರ್ಬಿನ್ ಬಾರ್ಷ್ ಅವರಿಗೆ ನಾಲ್ಕನೇ ಸೀಮಿರ್ ಆಗಿ ಸ್ಥಾನವನ್ನು ಕಲ್ಪಿಸಲಾಗಿದೆ. ಇವರ ಜೊತೆಗೆ ಕಗಿಸೊ ರಬಾಡ, ಡೇನ್ ಪೀಟರ್ಸನ್ ಹಾಗೂ ಮಾರ್ಕೊ ಯೆನ್ಸನ್ ಮುಂಚೂಣಿ ಫಾಸ್ಟ್ ಬೌಲರ್ಗಳಾಗಿ ಆಡಲಿದ್ದಾರೆ. ಇನ್ನು ಹಿರಿಯ ಸ್ಪಿನ್ನರ್ ಕೇಶವ್ ಮಹಾರಾಜ್ ಅವರನ್ನು ಮೊದಲನೇ ಟೆಸ್ಟ್ನಿಂದ ಕೈ ಬಿಡಲಾಗಿದೆ.
ಕಾರ್ಬಿನ್ ಮಾರ್ಷ್ಗೆ ಅವಕಾಶ
ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದ ರಿಯಾನ್ ರಿಕಲ್ಟನ್ ಅವರು, ಇದೀಗ ಪಾಕ್ ಎದುರಿನ ಮೊದಲನೇ ಟೆಸ್ಟ್ ಪಂದ್ಯದ ಪ್ಲೇಯಿಂಗ್ XIಗೆ ಮರಳಿದ್ದಾರೆ. ಕಾರ್ಬಿನ್ ಬಾರ್ಷ್ ಕೇವಲ ಬೌಲಿಂಗ್ ಮಾತ್ರವಲ್ಲ, ಬ್ಯಾಟಿಂಗ್ನಲ್ಲಿಯೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಇವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 40.46ರ ಸರಾಸರಿಯಲ್ಲಿ ರನ್ಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ 50 ಓವರ್ಗಳ ಸ್ವರೂಪಕ್ಕೆ ಪದಾರ್ಪಣೆ ಮಾಡಿದ್ದರು ಹಾಗೂ 40 ರನ್ ಗಳಿಸಿ ಗಮನವನ್ನು ಸೆಳೆದಿದ್ದರು. ನಂತರ ಬೌಲಿಂಗ್ನಲ್ಲಿ 69 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು.
ಟೋನಿ ಜಾರ್ಜ್-ಏಡೆನ್ ಮಾರ್ಕ್ರಮ್ ಓಪನರ್ಸ್
ಟೋನಿ ಜಾರ್ಜ್ ಮತ್ತು ಏಡೆನ್ ಮಾರ್ಕ್ರಮ್ ಅವರು ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಹೆಚ್ಚಿನ ರನ್ಗಳನ್ನು ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆದರೆ, ಪಾಕ್ ಎದುರಿನ ಮೊದಲನೇ ಟೆಸ್ಟ್ನಲ್ಲಿಯೂ ಅವರ ಮೇಲೆ ನಂಬಿಕೆ ಇಡಲಾಗಿದೆ. ಪಾಕಿಸ್ತಾನದ ಸೀಮ್ ಬೌಲರ್ಗಳಾದ ನಸೀಮ್ ಶಾ, ಮಿರ್ ಹಂಝಾ, ಅಮರ್ ಜಮಲ್, ಮೊಹಮ್ಮದ್ ಅಬ್ಬಾಸ್ ಹಾಗೂ ಖುರ್ರಾನ್ ಶಹ್ಜಾದ್ ಅವರನ್ನು ಈ ಆರಂಭಿಕ ಜೋಡಿ ಮೆಟ್ಟಿ ನಿಲ್ಲಬಹುದು.
ಪಾಕಿಸ್ತಾನ ವಿರುದ್ಧ ಮೊದಲನೇ ಟೆಸ್ಟ್ಗೆ ದಕ್ಷಿಣ ಆಫ್ರಿಕಾದ ಪ್ಲೇಯಿಂಗ್ XI
ಟೋನಿ, ಡಿ ಜಾರ್ಜ್, ಏಡೆನ್ ಮಾರ್ಕ್ರಮ್, ರಿಯಾನ್ ರಿಕಲ್ಟನ್, ಟ್ರಿಸ್ಟನ್ ಸ್ಟಬ್ಸ್, ತೆಂಬಾ ಬವೂಮ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರೆನ್, ಮಾರ್ಕೊ ಯೆನ್ಸನ್, ಕಗಿಸೊ ರಬಾಡ, ಡೇನ್ ಪೀಟರ್ಸನ್ ಹಾಗೂ ಕಾರ್ಬಿನ್ ಬಾಷ್
ಈ ಸುದ್ದಿಯನ್ನು ಓದಿ:SA VS PAK: ಹರಿಣಗಳನ್ನು ಮಣಿಸಿ ವಿಶ್ವ ದಾಖಲೆ ಬರೆದ ಪಾಕಿಸ್ತಾನ